ತಿರುವನಂತಪುರ, ಡಿ 27 (DaijiworldNews/SK): ಪ್ರಯಾಣಿಕರಿಗೆ ಶಬ್ಧರಹಿತ ಮತ್ತು ಶಾಂತಿಯುತ ಪ್ರಯಾಣದ ಅನುಭವ ನೀಡುವ ಉದ್ದೇಶದಿಂದ ಕೇರಳ ತಿರುವನಂತಪುರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಜ. ೧ ರಿಂದ ಸೈಲೆಂಟ್ ಏರ್ಪೋರ್ಟ್ ಆಗಿ ಬದಲಾಯಿಸಲಾಗುತ್ತದೆ ಎಂದು ಕೇರಳ ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಸೈಲೆಂಟ್ ಏರ್ಪೋರ್ಟ್ ಉಪಕ್ರಮದ ಉದ್ದೇಶವು ಪ್ರಯಾಣಿಕರು ತಮ್ಮ ಕಾಯುವಿಕೆ ಸಮಯದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ತಮ್ಮ ನೆಚ್ಚಿನ ಚಟುವಟಿಕೆಗಳನ್ನು ಆನಂದಿಸಲು ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಟರ್ಮಿನಲ್ -1 ಮತ್ತು ಟರ್ಮಿನಲ್ -2ರಲ್ಲಿ ಎಲ್ಲ ವಿಮಾನಗಳ ಮಾಹಿತಿಯನ್ನು ಪ್ರದರ್ಶನ ಪರದೆಗಳಲ್ಲಿ ಪ್ರದರ್ಶಿಸುವುದರ ಜೊತೆಗೆ ತುರ್ತು ಮತ್ತು ಭದ್ರತೆಗೆ ಸಂಬಂಧಿಸಿದ ಪ್ರಕಟಣೆಗಳನ್ನು ಅಗತ್ಯತೆಗಳಿಗೆ ಅನುಸಾರವಾಗಿ ಘೋಷಣೆಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನುಳಿದಂತೆ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಗೇಟ್ ಮತ್ತು ಇನ್ಲೈನ್ ಬ್ಯಾಗೇಜ್ ಸ್ಕ್ರೀನಿಂಗ್ ಸಿಸ್ಟಮ್ನಲ್ಲಿ ಬದಲಾವಣೆಗೆ ಸಂಬಂಧಿಸಿದ ಪ್ರಕಟಣೆಗಳನ್ನು ಮಾತ್ರ ಮೈಕ್ ಮೂಲಕ ಘೋಷಣೆ ಮಾಡಲಾಗುವುದು ಎಂದು ತಿಳಿದು ಬಂದಿದೆ.
ಇನ್ನು ತಿರುವನಂತಪುರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸೈಲೆಂಟ್ ಏರ್ಪೋರ್ಟ್ ಉಪಕ್ರಮವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಎಕ್ಸ್, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಕೈಗೊಳ್ಳಲಾಗುವುದು ವಕ್ತಾರರು ತಿಳಿಸಿದ್ದಾರೆ.