ಡಿ 30 (DaijiworldNews/SK): ಸಾಮಾನ್ಯವಾಗಿ ಸಂಬಂಧಗಳು ಹತ್ತಿರವಾಗುವುದು ಪರಸ್ಪರ ಹೊಂದಾಣಿಕೆ, ಒಂದೇ ರೀತಿಯ ಅಭಿರುಚಿ ಇದ್ದಾಗ. ಹೀಗೆ ಒಂದೇ ರೀತಿಯ ಅಭಿರುಚಿ ಹೊಂದಿದ ಅಪರಿಚಿತ ವ್ಯಕ್ತಿಗಳಿಬ್ಬರು ಐಎಎಸ್ ಅಧಿಕಾರಿಯಾಗುವ ಗುರಿಯ ಮೂಲಕ ಭೇಟಿ ಆಗುತ್ತಾರೆ. ಯುಪಿಎಸ್ ಸಿ ಪರೀಕ್ಷೆಗೆ ಒಟ್ಟಿಗೆ ತಯಾರಿ ನಡೆಸಿ ಅಂತಿಮವಾಗಿ ಐಎಎಸ್ ಅಧಿಕಾರಿಗಳಾಗುತ್ತಾರೆ. ಕೊನೆಗೆ ಸಂಗಾತಿಗಳೂ ಆಗುತ್ತಾರೆ. ಈ ಮೂಲಕ ಇತರ ಜೋಡಿಗಳಿಗೆ ಮಾದರಿಯಾದವರು ಘನಶ್ಯಾಮ್ ದಂಪತಿಗಳು.
ಪ್ರಸ್ತುತ ಯುಪಿಯ ಫಿರೋಜಾಬಾದ್ನಲ್ಲಿ ಮುನ್ಸಿಪಲ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿರುವ ಘನಶ್ಯಾಮ್ ಮೀನಾ ಅವರು ಪಿಲಾನಿಯ ಬಿರ್ಲಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಬಿಐಟಿಎಸ್ ಪಿಲಾನಿಯಿಂದ ಎಂಜಿನಿಯರಿಂಗ್ನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು.
2009 ರಲ್ಲಿ ಪದವಿ ಪಡೆದ ಅವರಿಗೆ ಜಾಗತಿಕ ಆರ್ಥಿಕ ಹಿಂಜರಿತದಿಂದ ಉದ್ಯೋಗಾವಕಾಶಗಳು ವಿರಳವಾಗಿತ್ತು. ಆಗ ಅವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮುಂದಾದರು. UPSC ತಯಾರಿಗಾಗಿ ದೆಹಲಿಗೆ ತೆರಳಿದ ಘನಶ್ಯಾಮ್ ಅವರು ಆರಂಭದಲ್ಲಿ ಹಿನ್ನಡೆಯನ್ನು ಅನುಭವಿಸಿದರು. ಆದರೂ ಛಲ ಬೀಡದ ಅವರು ರಾಜಸ್ಥಾನ ಪಿಸಿಎಸ್ ಫಾರ್ಮ್ ಅನ್ನು ಭರ್ತಿ ಮಾಡಿ, ಮೊದಲ ಪ್ರಯತ್ನದಲ್ಲಿ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದರು.
ಬಳಿಕ ಸಂದರ್ಶನದ ತಯಾರಿಗಾಗಿ ಜೋದ್ಪುರಕ್ಕೆ ತೆರಳಿದ್ದ ಸಂದರ್ಭದಲ್ಲಿ ಘನಶ್ಯಾಮ್ ಮೀನಾ ಅವರು ಅನಿತಾ ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಅನಿತಾ ಅವರು ಕೂಡಾ ಯುಪಿಎಸ್ಸಿ ಸಂದರ್ಶನಗಳಿಗೆ ತಯಾರಿ ನಡೆಸುತ್ತಿದ್ದರು. ಜೋದ್ಪುರ ಸಂದರ್ಶನದ ಸಮಯದಲ್ಲಿ ಇಬ್ಬರ ನಡುವೆ ಪರಿಚಯವಾಗಿ ಆತ್ಮೀಯರಾಗಿದ್ದರು. ಆ ಬಳಿಕ ಇಬ್ಬರೂ ಕೂಡಾ ನಾಗರಿಕ ಸೇವಾ ಪರೀಕ್ಷೆ UPSCಗೆ ತಯಾರಿ ನಡೆಸಲು ನಿರ್ಧರಿಸಿದರು. 2013ರಲ್ಲಿ ಯುಪಿಎಸ್ಸಿ ಪ್ರಿಲಿಮ್ಸ್ ನಲ್ಲಿ ತೇರ್ಗಡೆಯಾಗಿದ್ದ ಅನಿತಾ ಮೊದಲ ಪ್ರಯತ್ನದಲ್ಲೇ ಮೇನ್ಸ್ ನಲ್ಲಿ ತೇರ್ಗಡೆಯಾಗಿರಲಿಲ್ಲ. ಹಾಗಾಗಿ ಅನಿತಾ ಅವರನ್ನು ಸೂಕ್ತ ತರಬೇತಿ ಮತ್ತು ಮಾರ್ಗದರ್ಶನದ ಮೂಲಕ ಘನಶ್ಯಾಮ್ ಪ್ರೇರೇಪಿಸಿದರು.
ಇದರ ನಡುವೆ ಘನಶ್ಯಾಮ್ ವಾಣಿಜ್ಯ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಾ ಸಂಜೆಯ ಬಳಿಕ UPSC ಸಿದ್ಧತೆಗಳಿಗೆ ಮೀಸಲಿಟ್ಟರು. ಅವರ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯ ಪ್ರತಿಫಲವಾಗಿ 2014 ರಲ್ಲಿ ರಾಜಸ್ಥಾನದಲ್ಲಿ ಪಿಸಿಎಸ್ ಅನ್ನು ಪಡೆದುಕೊಂಡರು
ನಂತರ 2015 ರಲ್ಲಿ, ಅನಿತಾ ಅವರು ಯುಪಿಎಸ್ಸಿ ಮೇನ್ಸ್ನಲ್ಲಿ ತೇರ್ಗಡೆ ಹೊಂದಿದ್ದರರೂ ಸಂದರ್ಶನದಲ್ಲಿ ಮಾತ್ರ ಬಹು ಬೇಗ ಯಶಸ್ಸನ್ನು ಕಾಣಲು ಸಾಧ್ಯವಾಗಲಿಲ್ಲ.
ಆದರೂ ಪ್ರಯತ್ನವನ್ನು ಕೈ ಬಿಡದ ಅನಿತಾ ಯಾದವ್ ಘನಶ್ಯಾಮ್ ರ ಪ್ರೋತ್ಸಾಹದ ಮೂಲಕ ಅಂತಿಮವಾಗಿ, 2017 ರಲ್ಲಿ 350 ರ ಅಖಿಲ ಭಾರತ ಶ್ರೇಣಿಯೊಂದಿಗೆ ಭಾರತೀಯ ಆಡಳಿತ ಸೇವೆ (IAS) ಕೇಡರ್ ಅನ್ನು ಪಡೆದುಕೊಂಡು ಪ್ರಸ್ತುತ ಯುಪಿಯ ಅಯೋಧ್ಯೆಯಲ್ಲಿ ಮುಖ್ಯ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಮೂಲಕ ಒಂದು ಯಶಸ್ಸಿಗೆ ಸ್ವ ಪ್ರಯತ್ನ ಎಷ್ಟು ಮುಖ್ಯವೋ ಅದೇ ರೀತಿ ಪ್ರೇರಣೆ ಹಾಗೂ ಕಠಿಣ ಪ್ರಯತ್ನದಿಂದ ಏನನ್ನು ಬೇಕಾದರೂ ಸಾಧಿಸಬಹುದು ಸಾಧಿಸಬಹುದು ಅನ್ನೋದಕ್ಕೆ ಘನಶ್ಯಾಮ್ ದಂಪತಿಗಳು ನೇರ ನಿದರ್ಶನವಾಗಿದ್ದಾರೆ.