ರಾಯಚೂರು, ಎ20(Daijiworld News/SS): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರದ ಮೇಲೆ ಗುಜರಾತ್ ಜನರಿಗೇ ನಂಬಿಕೆ ಇಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ತೊಲಗಬೇಕೆಂದು ದೇಶದ ಜನತೆಯಷ್ಟೇ ಅಲ್ಲ, ಸ್ವತಃ ಮೋದಿ ತವರು ರಾಜ್ಯ ಗುಜರಾತ್ ನಲ್ಲೂ ಈ ಬಗ್ಗೆ ಕೂಗೆದ್ದಿದೆ. ದೇಶದ ಯಾವುದೇ ಭಾಗಕ್ಕೆ ಹೋಗಿ ಚೌಕಿದಾರ್ ಎಂದು ಹೇಳಿದರೆ " ಚೋರ್ ಹೈ " ಎಂಬ ಘೋಷಣೆ ಮೊಳಗುತ್ತದೆ ಎಂದು ಹೇಳಿದರು.
ಮೋದಿಯವರು ಈ ಹಿಂದೆ ಅಚ್ಚೆ ದಿನ್ ಎಂದು ಹೇಳುತ್ತಿದ್ದರು, ಈಗ ಚೋರ್ ಎಂದು ಹೇಳುತ್ತಿದ್ದಾರೆ. ಗುಜರಾತಿನಲ್ಲಿ ಉದ್ಯಮಿ ಅದಾನಿ ಗ್ರೂಪ್ ಅಲ್ಲಿನ ರೈತರ ಜಮೀನು ಕಬಳಿಸುತ್ತಿರುವ ಬಗ್ಗೆ ಜನರಲ್ಲಿ ಭಾರೀ ಆಕ್ರೋಶವಿದೆ. ಇವತ್ತು ಗುಜರಾತಿನಿಂದ ಇಲ್ಲಿಗೆ ಆಗಮಿಸಿದ್ದೇನೆ. ಅಲ್ಲಿನ ಜನತೆ ಮೋದಿ ಸರ್ಕಾರ ಮೊದಲು ತೊಲಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿರು.
ಕೇಂದ್ರ ಸರ್ಕಾರ ಜಾರಿಗೆ ತಂದ ಜಿಎಸ್ ಟಿ ಯಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ನಾವು ಅಧಿಕಾರಕ್ಕೆ ಬಂದಲ್ಲಿ ಗಬ್ಬರ್ ಸಿಂಗ್ ತೆರಿಗೆಯನ್ನು ಸರಳಗೊಳಿಸಿ, ಅರ್ಥ ವ್ಯವಸ್ಥೆಯನ್ನು ಸದೃಢಗೊಳಿಸುತ್ತೇವೆ. ನ್ಯಾಯ್ ಯೋಜನೆ ಮೂಲಕ ಬಡವರ ಖಾತೆಗೆ ಪ್ರತಿ ವರ್ಷ 72 ಸಾವಿರ ರೂ ಜಮೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಮೋದಿ ಆಡಳಿತದ ಐದು ವರ್ಷಗಳಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ನೋಟು ಅಮಾನ್ಯೀಕರಣದಿಂದ ಸಣ್ಣ ಉದ್ದಿಮೆಗಳು ಮುಚ್ಚುವಂತಾಯಿತು. ಇದರಿಂದ ಅಸಂಖ್ಯಾತ ಉದ್ಯೋಗ ನಷ್ಟವಾಯಿತು. ಪ್ರತಿ ದಿನದ ಲೆಕ್ಕದಲ್ಲಿ ಅಲ್ಲ. ಪ್ರತಿ ಗಂಟೆ ಲೆಕ್ಕದಲ್ಲಿ ಉದ್ಯೋಗ ಕಳೆದುಕೊಳ್ಳುತ್ತಿರುವ ಭೀತಿ ಆವರಿಸಿದೆ ಎಂದು ಕಿಡಿ ಕಾರಿದರು.
ಕಳೆದ ಚುನಾವಣೆ ಸಂದರ್ಭದಲ್ಲಿ ಮೋದಿ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ ಜಮೆ ಮಾಡುವ ಭರವಸೆ ನೀಡಿದ್ದರು. ಆ ಭರವಸೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ನಾವು ರೈತರು ಮತ್ತು ಬಡವರ ಪರವಾಗಿ ಆಡಳಿತ ನಡೆಸುತ್ತೇವೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ ಎಂದು ತಿಳಿಸಿದರು.