ಬೆಂಗಳೂರು,ಏ20(Daijiworld News/AZM):ರಾಜ್ಯಾದ್ಯಂತ ರಾಯಚೂರಿನಲ್ಲಿ ನಡೆದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿಗೆ ತೀವ್ರ ಖಂಡನೆ ವ್ಯಕ್ತವಾಗಿದ್ದ ಬೆನ್ನಲ್ಲೇ ಈ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಕೂಡ ಬೇಸರ ವ್ಯಕ್ತಪಡಿಸಿದ್ದು, ಭಾವನಾತ್ಮಕ ಪತ್ರ ಬರೆದಿದ್ದಾರೆ.
ಯೋಗರಾಜ್ ಭಟ್ ಅವರ ಭಾವನಾತ್ಮಕ ಪತ್ರ ಹೀಗಿದೆ.
ಇಂದು ಯಾಕೆ ಸುಮ್ಮನಿದೆ? ಅಂದು ಭಾರತವೇ ಕೂಗಿತು. ''ವಿಕೃತನೊಬ್ಬನ ಕೆಲಸಕ್ಕೆ ಹೂವೊಂದು ಸುಟ್ಟು ಹೋಗಿದೆ. ಎಲ್ಲ ಕಡೆಗೆ ಮರುಕ ಮಡುಗಟ್ಟುತ್ತಿದೆ 'ಮಧು' ಎಂಬ ಅಮಾಯಕಿ ಕೊಲೆಗೆ. ಇದೇ ರೀತಿಯ ಕೃತ್ಯ ದೆಹಲಿಯಲ್ಲಿ ನಡೆದಾಗ ಇಡೀ ಭಾರತ ಕೂಗಿತು. ಆದರೆ ನಮ್ಮ ರಾಜಧಾನಿ ಬೆಂಗಳೂರು ಮಾತ್ರ ಮೊನ್ನೆಯಿಂದಲೂ ಪ್ರತಿಕ್ರಿಯೆ ನೀಡಲು, ಮಾತನಾಡಲು ಮನಸ್ಸು ಮಾಡುತ್ತಿಲ್ಲ''. ಎಲ್ಲ ಮಕ್ಕಳು ಒಂದೇ ಅಲ್ವಾ
ಬೆಂಗಳೂರು ಜನರು ಯಾಕೆ ಹೀಗೆ? ''ಹೋಗಲಿ ಏನೋ ವೋಟು ಹಾಕುವ ಕೆಲಸ ಇತ್ತು ಅನ್ನುವುದಾದರೆ ಅದೂ ಇಲ್ಲ. 45 % ಜನ ಮಾತ್ರ ಮತ ಹಾಕಿದ್ದಾರೆ. ಬಾಕಿ ಜನರು ದಿವ್ಯ ನಿದ್ದೆಯಲ್ಲಿದ್ದಾರಾ? ಯಾರು ಎಬ್ಬಿಸುವುದು ಇವರನ್ನು? ಮಧು ಆತ್ಮಕ್ಕೆ ನೆಮ್ಮದಿಕೋರುವುದು ಪ್ರತಿಯೊಬ್ಬನ ಕರ್ತವ್ಯ ಅಲ್ಲವೇ? ಯಾರ ಮನೆಯ ಮಗುವಾದರೇನು ಸಾವೆಂಬ ಸಂಕಟ ಎಲ್ಲರಿಗು ತೀವ್ರವಾಗಿ ಕಾಡಬೇಕಲ್ಲವೇ?''
ಇಂತಹ ಕೃತ್ಯದಿಂದ ಮಕ್ಕಳನ್ನ ಕಾಪಾಡಬೇಕು.ಮೊದಲು ಪ್ರತಿಕ್ರಿಯೆಸಿ ಮಾನವೀಯತೆ ತೋರಿಸಿ. ''ದಯಮಾಡಿ ಈ ಮಾನಭಂಗ ಕೊಲೆಯಂತಹ ವಿಕೃತಿಗಳನ್ನು ತಡೆಯಲು ತಡವಾದರೂ ಪರವಾಗಿಲ್ಲ ಕೊನೆ ಪಕ್ಷ ಪ್ರತಿಕ್ರಿಯಿಸಿ.. ಒಂದೇ ದನಿಯಲ್ಲಿ ಒಂಚೂರು ಆವೇಶದಲ್ಲಿ ಭವಿಷ್ಯದ ಹೂವುಗಳನ್ನು ಸುಡಲು ಬರುವ ಬೆಂಕಿಯನ್ನು ಒಂದೇ ಒಂದು 'ಕಿಡಿ' ಕೂಡ ಉಳಿಯದಂತೆ ನಂದಿಸಲು ಮುಂದಾಗಿ...ಮಧು...ಕಂದಮ್ಮ...ನಿನಗೆ ನ್ಯಾಯ ನೀ ಇಲ್ಲದಿದ್ದರೂ..ಸಿಗಲಿ....ಹೋಗಿ ಬಾ ತಾಯಿ...'' ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಶಿಕ್ಷೆಯಾಗಲೇ ಬೇಕು
ರಾಯಚೂರಿನ ಮಾಣಿಕ್ ಪ್ರಭು ದೇವಸ್ಥಾನದ ಗುಡ್ಡದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿತ್ತು. ಏಪ್ರಿಲ್ 16ರಂದು ಈ ಪ್ರಕರಣ ಬೆಳಕಿಗೆ ಬಂದಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.