ನವದೆಹಲಿ,ಏ20(Daijiworld News/AZM): ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚಿತ್ರಣವನ್ನೊಳಗೊಂಡ ವೆಬ್ ಸೀರೀಸ್ ಪ್ರಸಾರಕ್ಕೆ ಚುನಾವಣಾ ಆಯೋಗ ತಡೆ ನೀಡಿದ್ದು, ಚುನಾವಣೆ ಮುಗಿಯುವವರೆಗೂ ಈ ವೆಬ್ ಸೀರೀಸ್ ಅನ್ನು ಪ್ರಸಾರ ಮಾಡದಂತೆ ಆದೇಶಿಸಿದೆ.
ಎರೋಸ್ ನೌ ಎಂಬ ಮನರಂಜನಾ ತಾಣವು ಮೋದಿ ಜರ್ನಿ ಆಫ್ ಎ ಕಾಮನ್ ಮ್ಯಾನ್ (Modi - Journey of a Common Man)ಎಂಬ ವೆಬ್ ಸೀರೀಸ್ ಅನ್ನು ಪ್ರಸಾರ ಮಾಡುತ್ತಿದ್ದು, ಇದರ ಪ್ರಸಾರ ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗಿದ್ದು, ಚುನಾವಣೆ ಮುಗಿಯುವವರೆಗೂ ಅದನ್ನು ಪ್ರಸಾರ ಮಾಡಬಾರದೆಂದು ಆಯೋಗ ಹೇಳಿದೆ.
ಏಪ್ರಿಲ್ 12 ರಂದು ತೆರೆ ಕಾಣಬೇಕಿದ್ದ ಪ್ರೈಮ್ ಮಿನಿಸ್ಟರ್ ನರೇಂದ್ರ ಮೋದಿ ಚಿತ್ರಕ್ಕೂ ಚುನಾವಣಾ ಆಯೋಗ ತಡೆ ನೀಡಿತ್ತು. ಅದರ ವಿರುದ್ಧ ಚಿತ್ರ ತಂಡ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿತ್ತು. ಇತ್ತೀಚೆಗಷ್ಟೇ ಈ ಸಂಬಂಧ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, 'ಮೊದಲು ಚಿತ್ರವನ್ನು ನೋಡಿ, ನಂತರ ಮುಚ್ಚಿದ ಲಕೋಟೆಯಲ್ಲಿ ನಿಮ್ಮ ಅಂತಿಮ ನಿರ್ಧಾರ ಬರೆದುಕೊಡಿ' ಎಂದು ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.