ಬೆಂಗಳೂರು, ಜ 02 (DaijiworldNews/AA): ಅಯೋಧ್ಯೆ ವಿಚಾರದಲ್ಲಿ ರಾಜಕೀಯ ಬೇಡ. ಅಯೋಧ್ಯೆ ವಿಚಾರವಾಗಿ ದಾಖಲಾದ ಪ್ರಕರಣಗಳನ್ನು ಹಿಂಪಡೆಯಬೇಕು. ಸರ್ಕಾರ ಈ ಕೂಡಲೇ ಪ್ರಕರಣವನ್ನು ವಾಪಾಸ್ ಪಡೆಯಲಿ ಎಂದು ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಎಂಎಲ್ ಸಿ ಜಗದೀಶ್ ಶೆಟ್ಟರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಮ ಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಕಾರ್ಯಕರ್ತನನ್ನು ಬಂಧಿಸಲು ಸರ್ಕಾರ ಹೇಳಿಲ್ಲ. ಕೋರ್ಟ್ ಆದೇಶವಾಗಿರಬಹುದು ಅಥವಾ ಪೊಲೀಸರೇ ನಿರ್ಧಾರ ಮಾಡಿರಬಹುದು. ಆದರೆ ಸರ್ಕಾರವೇ ಬಂಧಿಸುವ ಕೆಲಸವನ್ನು ಮಾಡಿದೆ ಎಂದರೆ ನಾನು ಒಪ್ಪುವುದಿಲ್ಲ. ಈ ಬಗ್ಗೆ ಬಿಜೆಪಿ ಪ್ರತಿಭಟನೆ ಮಾಡಿದರೆ ಮಾಡಲಿ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಪ್ರಕರಣಗಳನ್ನು ರದ್ದು ಮಾಡಿದ್ದರೆ ಆಗುತ್ತಿತ್ತು ಎಂದು ಹೇಳಿದರು.
ಹಿಂದೆ ಅಯೋಧ್ಯೆ ವಿಚಾರವಾಗಿ ಗಲಭೆಗಳಾದರೆ ರೌಡಿಶೀಟ್ ತೆರೆಯುತ್ತಿದ್ದರು. ಹೀಗೆ ರೌಡಿಶೀಟ್ ತೆರೆದವರ ಪೈಕಿ ಅವರಿಗೀಗ 50-60 ವರ್ಷವಾಗಿರುತ್ತದೆ. ವಯಸ್ಸಾದವರನ್ನು ರೌಡಿಶೀಟ್ ನಿಂದ ತೆಗೆಯಲು ಕಮಿಷನರ್ ಗಳಿಗೆ ತಿಳಿಸಿದ್ದೇನೆ. ಸಚಿವ ಸಂಪುಟದಲ್ಲಿ ಈ ವಿಷಯ ಪ್ರಸ್ತಾಪಿಸಿ ಪ್ರಕರಣ ವಾಪಾಸ್ ಮಾಡಿಸುವ ಯತ್ನ ಮಾಡಿದ್ದೇನೆ ಎಂದು ಅವರು ತಿಳಿಸಿದರು.