ಬೆಂಗಳೂರು,ಏ20(Daijiworld News/AZM)- ಏ.23ರಂದು ಕರ್ನಾಟಕದ 14 ಕ್ಷೇತ್ರಗಳಿಗೆ ೨ನೇ ಹಂತದ ಲೋಕಸಭೆ ಚುನಾವಣೆ ನಡೆಯುತ್ತಿದ್ದು, ಈ ಹಿನ್ನಲೆ ಭಾನುವಾರ ಏ.21ರಂದು ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದೆ.
ಏ.23ರಂದು ಚಿಕ್ಕೋಡಿ, ಕೊಪ್ಪಳ, ಬೆಳಗಾವಿ, ಬಳ್ಳಾರಿ, ಬಾಗಲಕೋಟೆ, ಹಾವೇರಿ, ವಿಜಯಪುರ, ಧಾರವಾಡ, ಕಲಬುರಗಿ, ಉತ್ತರ ಕನ್ನಡ, ರಾಯಚೂರು, ದಾವಣಗೆರೆ, ಬೀದರ್, ಶಿವಮೊಗ್ಗ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು,ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಪ್ರಚಾರದ ಅಬ್ಬರ ಮುಗಿಲು ಮುಟ್ಟಿತ್ತು.
ಭದ್ರಾವತಿಯಲ್ಲಿ ಅಮಿತ್ ಶಾ ರಾಘವೇಂದ್ರ ಪರ ರೋಡ್ ಶೋ ನಡೆಸಿದರೆ, ಸುಷ್ಮಾ ಸ್ವರಾಜ್ ಧಾರವಾಡದ ಪ್ರಹ್ಲಾದ್ ಜೋಶಿ ಪರ ಪ್ರಚಾರ ನಡೆಸಿದರು. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಬಾಗಲಕೋಟೆಯಲ್ಲಿ ಬೈಕ್ ರ್ಯಾಲಿ ನಡೆಸುವ ಮೂಲಕ ವೀಣಾ ಕಾಶಂಪೂರ್ ಪರ ಮತ ಯಾಚನೆ ಮಾಡಿದರು.
ಧಾರವಾಡ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ವಿನಯ್ ಕುಲಕರ್ಣಿ ಪರ ಸಿದ್ದರಾಮಯ್ಯ ರೋಡ್ ಶೋ ನಡೆಸಿ ಪ್ರಚಾರ ಕೈಗೊಂಡರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ.ಶಿವಕುಮಾರ್ ಮಧು ಪರವಾಗಿ ಭದ್ರಾವತಿಯಲ್ಲಿ ಭಾರೀ ರೋಡ್ ಶೋ ಮೂಲಕ ಮತಯಾಚನೆ ಮಾಡಿದ ನಂತರ ಉಂಬ್ಳೆಬೈಲಿನಲ್ಲಿ ಬಹಿರಂಗ ಸಮಾವೇಶ ನಡೆಸಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಉಳಿದ ಕ್ಷೇತ್ರಗಳಲ್ಲೂ ಮತದಾರರ ಮನವೊಲಿಸಲು ಅಂತಿಮ ಕಸರತ್ತು ನಡೆಸಿದ ನಾಯಕರು ಭರ್ಜರಿ ರೋಡ್ ಶೋ, ಬಹಿರಂಗ ಸಮಾವೇಶ, ರ್ಯಾಲಿಗಳನ್ನು ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಏ.೨೧ರಂದು ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತಿದ್ದು,ವಿವಿಧ ಕ್ಷೇತ್ರಗಳಲ್ಲಿ ಭಾರೀ ಪ್ರಚಾರ ಸಭೆಗಳು ನಡೆಯಲಿವೆ. ಏ.23ರಂದು 14ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.