ಚಿತ್ರದುರ್ಗ, ಜ 05 (DaijiworldNews/HR): ಒಂದೇ ಮನೆಯಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದ ಮರಣೋತ್ತರ ಪರೀಕ್ಷೆ ನಡೆದ ಏಳು ದಿನಗಳು ಕಳೆದರೂ ಆ ವರದಿ ಇನ್ನೂ ಕೂಡ ಪೊಲೀಸರ ಕೈಸೇರಿಲ್ಲ ಎಂದು ವರದಿಯಾಗಿದೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯ ಡಾ.ವೇಣು ಪೋಸ್ಟ್ ಮಾರ್ಟಂ ಮಾಡುವ ಏಕೈಕ ವೈದ್ಯರಾಗಿದ್ದು, ಅವರು ಕೆಲವು ದಿನಗಳಿಂದ ತರಬೇತಿ ಕಾರ್ಯಗಾರದಲ್ಲೂ ಭಾಗಿಯಾಗಿದ್ದಾರೆ. ಹೀಗಾಗಿ ವರದಿ ಪೊಲೀಸರ ಕೈಸೇರುವಲ್ಲಿ ವಿಳಂಬವಾಗಿದೆ ಎನ್ನಲಾಗಿದೆ.
ಇನ್ನು ಡಿಸೆಂಬರ್ 28 ರ ರಾತ್ರಿ ಮನೆಯೊಂದರಲ್ಲಿ ಐವರು ವ್ಯಕ್ತಿಗಳ ಅಸ್ಥಿಪಂಜರಗಳು ಪತ್ತೆಯಾಗಿದ್ದು, ಡಿ. 29 ರಂದು ಅಸ್ಥಿಪಂಜರಗಳನ್ನು ಪೊಲೀಸರು ಜೆಎಂಐಟಿ ಶವಾಗಾರಕ್ಕೆ ರವಾನಿಸಿದ್ದರು.
ಡಿಸೆಂಬರ್ 30 ರಂದು ಮರಣೋತ್ತರ ಪರೀಕ್ಷೆ ನಡೆದಿದ್ದು, ಎರಡು ದಿನಗಳಲ್ಲಿ ಪೊಲೀಸರ ಕೈ ಸೇರಬೇಕಾಗಿದ್ದ ವರದಿ ನಾಳೆ ಸಂಜೆ ವೇಳೆಗೆ ಕೈಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.