ಬೆಂಗಳೂರು,ಜ 05 (DaijiworldNews/ AK): ನೂರಾರು ವರ್ಷಗಳ ಕಾಲ ನಮ್ಮ ದೇಶವನ್ನು ಆಡಳಿತ ನಡೆಸಿದ ಬ್ರಿಟಿಷರು ಕಾಂಗ್ರೆಸ್ ಪಕ್ಷಕ್ಕೆ ‘ಒಡಕನ್ನು ಮೂಡಿಸಿ ಆಡಳಿತ ನಡೆಸುವ ನೀತಿ’ಯನ್ನು ಕೊಟ್ಟು ಹೋಗಿದ್ದಾರೆ. ಕಾಂಗ್ರೆಸ್ಸಿಗರು ಅದರ ದುರುಪಯೋಗವನ್ನು ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ನಡೆದ ‘ಬಲವರ್ಧನೆಗಾಗಿ ಭೀಮ ಸಮಾವೇಶ’ದಲ್ಲಿ ಅವರು ಮಾತನಾಡಿದರು. ಇದೊಂದು ಚಿಂತನ ಮಂಥನ ಕಾರ್ಯಕ್ರಮ ಎಂದರು. ನೆಹರೂ 17 ವರ್ಷ, ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಸೇರಿ ಕಾಂಗ್ರೆಸ್ ಪಕ್ಷವು 55- 60 ವರ್ಷ ದೇಶವನ್ನಾಳಿದೆ. ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ನೆಹರೂ ಕುಟುಂಬದ ಹಾಗೂ ಕಾಂಗ್ರೆಸ್ನ ರಬ್ಬರ್ ಸ್ಟಾಂಪ್ ಆಗಿದ್ದರು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಗರೀಬಿ ಹಠಾವೋ ಮೂಲಕ ದಲಿತರ ಏಳಿಗೆ ಆಗಲಿಲ್ಲ. ಬಾಬಾಸಾಹೇಬರ ಹೆಸರು ಹೇಳಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಪಕ್ಷವು ಹಿಂದೆ ಚುನಾವಣೆಯಲ್ಲಿ ಅಂಬೇಡ್ಕರ್ ಅವರನ್ನು ಸೋಲಿಸಿತ್ತು. ಅವರ ಅಂತ್ಯಸಂಸ್ಕಾರಕ್ಕೆ ಸ್ಥಳವನ್ನೂ ಕೊಟ್ಟಿರಲಿಲ್ಲ ಎಂದು ಆಕ್ಷೇಪಿಸಿದರು. ದಲಿತರನ್ನು ಓಟ್ ಬ್ಯಾಂಕ್ ಆಗಿ ಕಾಂಗ್ರೆಸ್ ಬಳಸಿಕೊಂಡಿತ್ತು ಎಂದು ದೂರಿದರು.
400ಕ್ಕೂ ಹೆಚ್ಚು ಸಂಸದರಿದ್ದ ಕಾಂಗ್ರೆಸ್ ಪಕ್ಷದ ಸಂಸದರ ಸ್ಥಾನ 44ಕ್ಕೆ ಇಳಿದಿದೆ. ಮತದಾರರು ಒಂದು ಬಾರಿ ಮೋಸ ಹೋಗಬಹುದು; ಎರಡು ಬಾರಿ ಮೋಸ ಹೋಗಬಹುದು. ಪದೇಪದೇ ಮೋಸ ಹೋಗುವುದಿಲ್ಲ ಎಂಬುದಕ್ಕೆ ಇದು ಉದಾಹರಣೆ. ಕಾಂಗ್ರೆಸ್ ಪಕ್ಷದ ಬೂಟಾಟಿಕೆಯ, ಮೋಸಗಾರಿಕೆಯ ರಾಜಕಾರಣವನ್ನು ಪ್ರಜ್ಞಾವಂತ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ವಿಶ್ಲೇಷಿಸಿದರು.