ಬೆಂಗಳೂರು, ಜ 05 (DaijiworldNews/AA): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಜನವರಿ 6 ರಿಂದ ಕೊರೊನಾ ಹೆಲ್ಪ್ ಲೈನ್ ನ್ನು ಲೋಕಾರ್ಪಣೆ ಮಾಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ 20 ರಲ್ಲಿ ಒಂದು ಪ್ರಕರಣವನ್ನು ತಪಾಸಣೆ ಮಾಡುತ್ತಿದ್ದೆವು. ಆದರೀಗ ಎಲ್ಲಾ ಐಎಲ್ ಐ ಸೇರಿ ವಯಸ್ಸಾದವರಿಗೂ ತಪಾಸಣೆ ಮಾಡಲಾಗುತ್ತಿದೆ. ಅದರಲ್ಲೂ ವಯಸ್ಸಾಗಿ ಅನಾರೋಗ್ಯದಿಂದ ಬಳಲುತ್ತಿರುವವರು ಕಡ್ಡಾಯವಾಗಿ ತಪಾಸಣೆಗೆ ಒಳಪಡಬೇಕು. ಜೊತೆಗೆ ಹೋಂ ಐಸೋಲೇಷನ್ ಆಗಿರುವ ವೃದ್ಧರ ಮೇಲೆ ನಿಗಾ ವಹಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 1240 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಪಾಸಿಟಿವಿಟಿ ದರ ಹೆಚ್ಚಾಗಿದ್ದು, ತಪಾಸಣೆ ಕೂಡ ಅಷ್ಟೇ ಹೆಚ್ಚಳವಾಗಿದೆ. ರೋಗ ಲಕ್ಷಣಗಳಿರುವವರ ಮೇಲೆ ನಿಗಾ ಇಡಲಾಗಿದ್ದು, ತಪಾಸಣೆ ನಡೆಸಲಾಗುತ್ತಿದೆ. ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಕಾಣುತ್ತಿದ್ದು, ಕರ್ನಾಟಕದಲ್ಲಿ ಇನ್ನೂ ಪ್ರಕರಣಗಳು ಇಳಿಕೆ ಕಂಡಿಲ್ಲ. ಮುಂಬರುವ ದಿನಗಳಲ್ಲಿ ಪ್ರಕರಣಗಳು ಇಳಿಮುಖವಾಗಬಹುದು. ಈಗಾಗಲೇ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಮಾರ್ಗದರ್ಶನ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮಾಧ್ಯಮದೊಂದಿಗೆ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು ಮಾತ್ರ ಮಾತನಾಡುವಂತೆ ಸೂಚಿಸಲಾಗಿದೆ. ಈ ಸಮಿತಿಯ ಅಧ್ಯಕ್ಷರನ್ನಾಗಿ ಡಾ. ಶಶಿಭೂಷಣ್ ಅವರನ್ನು ನೇಮಕ ಮಾಡಲಾಗಿದೆ. ಇದುವರೆಗೆ 20 ಮಂದಿ ಸಾವನ್ನಪ್ಪಿದ್ದು, ಈ ಪೈಕಿ 10 ಮಂದಿಯ ಸಾವಿನ ಆಡಿಟ್ ರಿಪೋರ್ಟ್ ಬಂದಿದೆ. ಓರ್ವ ಮಾತ್ರ ಕೊರೊನಾದಿಂದ ಮೃತಪಟ್ಟಿದ್ದರೆ, ಉಳಿದವರು ಅನ್ಯ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ. ಎಲ್ಲಾ ಸಾವನ್ನಪ್ಪಿದ ಸೋಂಕಿತರ ಡೆತ್ ಆಡಿಟ್ ಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.