ಕಾಸರಗೋಡು, ಏ 21(Daijiworld News/SM): ಕಾಸರಗೋಡಿನಲ್ಲಿ ಏಪ್ರಿಲ್ 23ರಂದು ನಡೆಯಲಿರುವ ಎರಡನೇ ಹಂತದ ಮತದಾನದ ಹಿನ್ನೆಲೆ ಬಹಿರಂಗ ಪ್ರಚಾರಕ್ಕೆ ಏಪ್ರಿಲ್ 21ರ ಆದಿತ್ಯವಾರ ತೆರೆಬಿದ್ದಿದೆ. ಕೊನೆಯ ಕ್ಷಣದಲ್ಲಿ ಮತದಾರರ ಮನ ಗೆಲ್ಲಲು ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸಿದವು.
ಕಾಸರಗೋಡು ಸೇರಿದಂತೆ ಕೇರಳದ ಎಲ್ಲಾ 20 ಕ್ಷೇತ್ರಗಳಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ಪ್ರಚಾರದ ಕೊನೇ ದಿನವಾದ ಆದಿತ್ಯವಾರ ಅಭ್ಯರ್ಥಿಗಳು ರೋಡ್ ಶೋ ಗೆ ಹೆಚ್ಚಿನ ಮಹತ್ವ ನೀಡಿದಂತಿತ್ತು. ಎಲ್ ಡಿ ಎಫ್ ಅಭ್ಯರ್ಥಿ ಕೆ.ಪಿ. ಸತೀಶ್ಚಂದ್ರನ್ ಹೊಸಂಗಡಿಯಿಂದ ರೋಡ್ ಶೋ ಆರಂಭಿಸಿ, ಪಯ್ಯನ್ನೂರಿನಲ್ಲಿ ಬಹಿರಂಗ ಪ್ರಚಾರದೊಂದಿಗೆ ಕೊನೆಗೊಳಿಸಿದರು.
ಇನ್ನು ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ರೋಡ್ ಶೋದಲ್ಲಿ ಪಾಲ್ಗೊಂಡಿದ್ದು ಸಂಜೆ ಕಾಸರಗೋಡು ನಗರದ ಹಳೆ ಬಸ್ಸು ನಿಲ್ದಾಣದಲ್ಲಿ ಅಬ್ಬರದ ಪ್ರಚಾರದೊಂದಿಗೆ ಕೊನೆಗೊಂಡಿತು. ಬಿಜೆಪಿ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಕೂಡ ಬಹಿರಂಗ ಪ್ರಚಾರದ ಕೊನೆಯ ದಿನ ರೋಡ್ ಶೋ ನಡೆಸಿದರು. ಒಂದು ತಿಂಗಳಿಗೂ ಅಧಿಕ ಸಮಯ ಈ ಬಾರಿ ಪ್ರಚಾರಕ್ಕೆ ಲಭಿಸಿದ್ದು, ಸಮಾವೇಶಗಳಿಗೆ ಒತ್ತು ನೀಡದೆ ಮತದಾರರನ್ನು ನೇರವಾಗಿ ಭೇಟಿ ಮಾಡಿ ಮತಯಾಚನೆ ನಡೆಸಿದ್ದರು.