ಬಿಹಾರ, ಜ 06 (DaijiworldNews/AA): ಕೆಲವೊಮ್ಮೆ ನಮಗೆ ಎಲ್ಲಾ ಸೌಲಭ್ಯಗಳು ಇದ್ದರೆ ಅದನ್ನು ನಾವು ಸರಿಯಾಗಿ ಉಪಯೋಗ ಮಾಡಿಕೊಳ್ಳುತ್ತಿರುವುದಿಲ್ಲ. ಆದರೆ ಕೆಲವರು ಮಾತ್ರ ಯಾವುದೇ ಸೌಲಭ್ಯಗಳಿಲ್ಲದೇ ಇದ್ದರೂ ದೊಡ್ಡ ದೊಡ್ಡ ಸಾಧನೆ ಮಾಡುವ ಮೂಲಕ ಮಾದರಿಯಾಗುತ್ತಾರೆ. ಇಂತಹವರಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ ಇರುವ ಸಣ್ಣ ಹಳ್ಳಿಯಲ್ಲಿ ಓದಿ, ಆರ್ಥಿಕ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಐಎಎಸ್ ಅಧಿಕಾರಿಯಾದ ಅಂಶುಮನ್ ರಾಜ್ ಅವರ ಕಥೆ ಇದು.
ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿನ ಸಣ್ಣ ಹಳ್ಳಿಯೊಂದರಲ್ಲಿ ಅಂಶುಮನ್ ರಾಜ್ ಅವರು ಜನಿಸುತ್ತಾರೆ. ತಮ್ಮ ಗ್ರಾಮದಲ್ಲೇ ಇದ್ದ ಜವಾಹರ ನವೋದಯ ವಿದ್ಯಾಲಯದಲ್ಲಿ 10ನೇ ತರಗತಿವರೆಗೆ ಓದುತ್ತಾರೆ. ಅಂಶುಮಾನ್ ಅವರ ಹಳ್ಳಿಯಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದ ಕಾರಣ ಅವರು ಸೀಮೆಎಣ್ಣೆ ದೀಪದ ಬೆಳಕಿನ ಸಹಾಯದಿಂದಲೇ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತಾರೆ.
ಹೈಸ್ಕೂಲ್ ಶಿಕ್ಷಣದ ನಂತರ ಅಂಶುಮನ್ ಅವರು ಜವಾಹರ್ ನವೋದಯ ವಿದ್ಯಾಲಯ (ಜೆಎನ್ ವಿ) ರಾಂಚಿಯಲ್ಲಿ 12ನೇ ತರಗತಿ ವರೆಗೆ ವ್ಯಾಸಂಗ ಮಾಡುತ್ತಾರೆ. ಈ ಸಂದರ್ಭ ಅವರನ್ನು ಆರ್ಥಿಕ ಸಮಸ್ಯೆ ಬಹಳ ಕಾಡುತ್ತಿತ್ತು. ಆದಾಗ್ಯೂ ಅಂಶುಮನ್ ಅವರು ಈ ಎಲ್ಲಾ ಸವಾಲುಗಳನ್ನು ಎದುರಿಸಿ ತಮ್ಮ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ.
ಅಂಶುಮನ್ ಅವರಿಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಐಎಎಸ್ ಅಧಿಕಾರಿಯಾಗಬೇಕೆಂಬ ಬಯಕೆ ಇತ್ತು. ಶಾಲಾ ದಿನಗಳಿಂದಲೆ ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಅಂಶುಮನ್, ಅದಕ್ಕಾಗಿ ಪದವಿ ಶಿಕ್ಷಣ ಮುಗಿದ ಬಳಿಕ ತಮ್ಮ ಹಳ್ಳಿಗೆ ಮರಳಿ ಯುಪಿಎಸ್ ಸಿ ತಯಾರಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ.
ಯುಪಿಎಸ್ ಸಿ ಪರೀಕ್ಷೆಯ ತಯಾರಿಗಾಗಿ ಅಂಶುಮನ್ ಅವರು ಯಾವುದೇ ತರಬೇತಿ ಪಡೆಯದೇ ಸ್ವಯಂ ಅಧ್ಯಯನ ನಡೆಸುತ್ತಾರೆ. ಇದರ ಪ್ರತಿಫಲ ಎಂಬಂತೆ ಅವರು ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಆರ್ ಎಸ್ ನಲ್ಲಿ ಸ್ಥಾನ ಪಡೆಯುತ್ತಾರೆ. ಆದರೆ ಅಂಶುಮನ್ ಅವರಿಗೆ ಐಆರ್ ಎಸ್ ಹುದ್ದೆ ಅವರಿಗೆ ತೃಪ್ತಿ ನೀಡಿರಲಿಲ್ಲ. ಬದಲಾಗಿ ಅವರಲ್ಲಿ ಐಎಎಸ್ ಅಧಿಕಾರಿಯಾಗಬೇಕೆಂಬ ಬಲವಾದ ಬಯಕೆ ಇತ್ತು.
ಅಂತಿಮವಾಗಿ ಅಂಶುಮನ್ ಅವರು 2019 ರಲ್ಲಿ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತಾರೆ. ಅಷ್ಟೇ ಅಲ್ಲದೆ 107 ನೇ ಅಖಿಲ ಭಾರತ ರ್ಯಾಂಕ್ ಕೂಡ ಗಳಿಸುವ ಮೂಲಕ ಐಎಎಸ್ ಅಧಿಕಾರಿ ಆಗುವಲ್ಲಿ ಯಶಸ್ವಿಯಾಗುತ್ತಾರೆ.