ಹುಬ್ಬಳ್ಳಿ, ಜ 06 (DaijiworldNews/AA): ಒಂದು ಕೋಮಿನ ಮತಕ್ಕಾಗಿ ತುಷ್ಟೀಕರಣದ ಪರಾಕಾಷ್ಠೆ ಹೆಚ್ಚಾಗಿದೆ. ರಾಮಮಂದಿರಕ್ಕೆ ಯಾರೂ ಬರಬಾರದೆಂಬ ದುಷ್ಟ ಯೋಜನೆ ಸಿದ್ದರಾಮಯ್ಯ ಸರ್ಕಾರದ್ದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರದ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಭಾಗವಹಿಸದಂತೆ ಕಾಂಗ್ರೆಸ್ ಸರ್ಕಾರದವರು ಭಯ ಹುಟ್ಟಿಸುತ್ತಿದ್ದಾರೆ. ಇದು ಸರ್ಕಾರ ನಡೆಸೋ ರೀತಿನಾ? ದೇಶದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿದೆ. ಕರಸೇವಕ ಶ್ರೀಕಾಂತ್ ಪೂಜಾರಿ ಮೇಲೆ 16 ಪ್ರಕರಣಗಳಿವೆ ಎಂದು ಯಾವ ಆಧಾರದಲ್ಲಿ ಹೇಳಿದ್ದೀರಿ? ಸಿದ್ದರಾಮಯ್ಯನವರೇ ನಿಮ್ಮದು ಸರ್ಕಾರನಾ? ಅಥವಾ ಸರ್ವಾಧಿಕಾರನಾ? ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಹುಚ್ಚು ಹುಚ್ಚಾಗಿ ಯಾರನ್ನೋ ಬಂಧಿಸಿದ್ದಾರೆ. ಇದು ಸರ್ಕಾರ ನಡೆಸುವ ವಿಧಾನವಲ್ಲ. ಒಂದು ಕೋಮಿನ ವೋಟಿಗಾಗಿ, ರಾಮ ಮಂದಿರ ಲೋಕಾರ್ಪಣೆ ಆಗುತ್ತಿದೆ ಎಂಬ ಹೊಟ್ಟೆಕಿಚ್ಚಿನಿಂದ ಏನೋ ಮಾಡಲು ಹೋಗಿ ಕಾಂಗ್ರೆಸ್ ಸರ್ಕಾರ ಕೈ ಸುಟ್ಟುಕೊಂಡಿದೆ. ಹೀಗೆ ಆದರೆ ಈ ಬಾರಿಯೂ ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ವಿರೋಧ ಪಕ್ಷವಾಗುವುದಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ನ ರಾಜಕೀಯ ಹೋರಾಟ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಶ್ರೀಕಾಂತ್ ಪೂಜಾರಿಗೆ ಜಾಮೀನು ಆಗಿರುವುದರಿಂದ ಹೋರಾಟ ಮುಂದುವರಿಸಬೇಕೋ ಅಥವಾ ಬೇಡವೋ ಎಂದು ತೀರ್ಮಾನಿಸುತ್ತೇವೆ. ನೀವು ಏನನ್ನೂ ರಾಜಕೀಯ ಲಾಭಕ್ಕಾಗಿ ಮಾಡುವುದಿಲ್ಲವಾ? ಶ್ರೀಕಾಂತ್ ಪೂಜಾರಿ ಅವರನ್ನು ಬಂಧಿಸಿರೋದು ರಾಜ್ಯದ ಹಿತ ದೃಷ್ಟಿಯಿಂದನಾ? ಎಂದು ಅವರು ಪ್ರಶ್ನಿಸಿದ್ದಾರೆ.