ವಾರಂಗಲ್, ಜ 07 (DaijiworldNews/AA): ನಮ್ಮ ಬಳಿ ಏನೂ ಸಂಪತ್ತಿಲ್ಲದೇ ಛಲದಿಂದಲೇ ಕೋಟ್ಯಾಧಿಪತಿಗಳಾದವರು ಅದೆಷ್ಟೋ ಮಂದಿ ಇದ್ದಾರೆ. ಅಂತಹವರಲ್ಲಿ ಕಡುಬಡತನದಲ್ಲಿ ಹುಟ್ಟಿ ಇಂದು ಬೃಹತ್ ಕಂಪನಿಯ ಸಿಇಒ ಆಗಿರುವ ಉದ್ಯಮಿ ಜ್ಯೋತಿ ರೆಡ್ದಿ ಅವರ ಕಥೆ ಇದು.
ಇಂದು ಬಿಲಿಯನ್ ಡಾಲರ್ ಸಾಫ್ಟ್ ವೇರ್ ಕಂಪನಿಯ ಸಿಇಒ ಆಗಿರುವ ಜ್ಯೋತಿ ರೆಡ್ದಿ ಅವರು ಬಾಲ್ಯದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದರು. ಜ್ಯೋತಿ ಅವರ ತಂದೆ ತಾಯಿಗೆ ಐದು ಜನ ಮಕ್ಕಳು. ಅವರಲ್ಲಿ ಜ್ಯೋತಿ ಎರಡನೇಯವರು. ಮನೆಯಲ್ಲಿ ಬಡತನವಿದ್ದ ಕಾರಣ ಕೂಲಿ ಕೆಲಸ ಮಾಡುತ್ತಿದ್ದ ತಂದೆ ಜ್ಯೋತಿ ಅವರನ್ನು ಅನಾಥಾಶ್ರಮಕ್ಕೆ ಸೇರಿಸುತ್ತಾರೆ.
ಜ್ಯೋತಿ ಅವರು ಅನಾಥಾಶ್ರಮದಲ್ಲಿದ್ದಾಗ ಸರ್ಕಾರಿ ಶಾಲೆಯಲ್ಲಿ ಓದಿದರು. ಕಲಿಕೆಯಲ್ಲಿ ಅತ್ಯಂತ ಆಸಕ್ತಿಯನ್ನು ಹೊಂದಿದ್ದ ಜ್ಯೋತಿ ಅವರಿಗೆ 16 ನೇ ವಯಸ್ಸಿನಲ್ಲೇ ಅವರಿಗೆ ಮದುವು ಮಾಡುತ್ತಾರೆ. ಬಳಿಕ ಜ್ಯೋತಿ ಅವರು 18ನೇ ವಯಸ್ಸಿನ ಹೊತ್ತಿಗೆ ಎರಡು ಮಕ್ಕಳ ತಾಯಿಯಾಗುತ್ತಾರೆ.
ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ತಲೆದೋರುತ್ತಿದ್ದಂತೆ ಜ್ಯೋತಿ ಅವರು ಭತ್ತದ ಗದ್ದೆಗಳಲ್ಲಿ ದಿನಕ್ಕೆ ಕೇವಲ 5 ರೂ. ಗಾಗಿ ದುಡಿಯುತ್ತಿದ್ದರು. ಬಳಿಕ ಜ್ಯೋತಿ ಅವರು ಕೇಂದ್ರ ಸರ್ಕಾರದ ಯೋಜನೆಯ ಲಾಭ ಪಡೆದು ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸುತ್ತಾರೆ. ಆದಾಗ್ಯೂ ಆರ್ಥಿಕ ಸಮಸ್ಯೆ ಕಡಿಮೆಯಾಗದೆ ಸಂಜೆ ಹೊತ್ತಿಗೆ ಟೈಲರಿಂಗ್ ಕೆಲಸವನ್ನೂ ಮಾಡುತ್ತಿದ್ದರು.
ಜ್ಯೋತಿ ಅವರು 1994ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಲಯದಿಂದ ಬಿಎ ಪದವಿ ಹಾಗೂ 1997ರಲ್ಲಿ ಕಾಕತೀಯ ವಿಶ್ವವಿದ್ಯಾಲಯದಲ್ಲಿ ಪಿಜಿ ಪದವಿ ಪಡೆಯುತ್ತಾರೆ. ಹೆಚ್ಚಿನ ವಿದ್ಯಾಭ್ಯಾಸ ಜ್ಯೋತಿ ಅವರಿಗೆ ಮೊದಲಿಗಿಂತ ಹೆಚ್ಚು ಸಂಪಾದನೆ ಮಾಡಲು ನೆರವಾಗುತ್ತದೆ. ಆದರೆ ತಿಂಗಳಿಗೆ 398 ರೂ. ಸಿಗುತ್ತಿತ್ತು. ಈ ಹಣವು ಅವರ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ.
ಬಳಿಕ ಯುಎಸ್ ನಲ್ಲಿರುವ ಸಂಬಂಧಿಯೊಬ್ಬರು ಸಾಫ್ಟ್ವೇರ್ ವೃತ್ತಿಪರರ ಅವಕಾಶಗಳ ಬಗ್ಗೆ ಜ್ಯೋತಿ ಅವರಿಗೆ ಮಾಹಿತಿ ನೀಡುತ್ತಾರೆ. ಕಂಪ್ಯೂಟರ್ ಕ್ರ್ಯಾಶ್ ಕೋರ್ಸ್ ಗಳನ್ನು ತೆಗೆದುಕೊಳ್ಳಲು ಮತ್ತು ಯುಎಸ್ ಎಗೆ ಬರುವಂತೆ ಪ್ರೇರೇಪಿಸುತ್ತಾರೆ. ವಿದೇಶದಲ್ಲಿರುವ ಅವಕಾಶಗಳ ಅರಿವಾಗಿ ಕಂಪ್ಯೂಟರ್ ಕೋರ್ಸ್ ಗಳನ್ನು ಪೂರ್ತಿಗೊಳಿಸಿ, ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಭಾರತಲ್ಲಿ ಬಿಟ್ಟು ಯುಎಸ್ ಗೆ ತೆರಳುತ್ತಾರೆ. ಆದರೆ ಯುಎಸ್ ನಲ್ಲಿ ಜ್ಯೋತಿ ಅವರ ದಿನಗಳು ಸುಲಭವಾಗಿರಲಿಲ್ಲ. ಪೆಟ್ರೋಲ್ ಪಂಪ್, ಬೇಬಿ ಸಿಟ್ಟರ್ ಗಳಲ್ಲಿ ಕೆಲಸ ಮಾಡುತ್ತಾರೆ.
2021 ರಲ್ಲಿ ಜ್ಯೋತಿ ಅವರು ತಮ್ಮ ಉಳಿತಾಯದ ಹಣವಾದ 40,000 ಯುಎಸ್ ಡಾಲರ್ ನೊಂದಿಗೆ ಕೀ ಸಾಫ್ಟವೇರ್ ಸೊಲ್ಯೂಷನ್ಸ್ ಎಂಬ ಕಂಪನಿಯನ್ನು ಪ್ರಾರಂಭಿಸುತ್ತಾರೆ. ಈ ಕಂಪನಿ ಉತ್ತಮ ಬೆಳವಣಿಗೆಯನ್ನು ಕಂಡಿತು. ಹಾಗೂ ಅಂತಿಮವಾಗಿ ಬಿಲಿಯನ್ ಡಾಲರ್ ಉದ್ಯಮವಾಯಿತು. ಈ ಮೂಲಕ ಜ್ಯೋತಿ ಅವರು ಎಲ್ಲಾ ಮಹಿಳೆಯರಿಗೂ ಸ್ಫೂರ್ತಿಯಾಗಿದ್ದಾರೆ.