ಮುಂಬೈ, ಜ 7 (DaijiworldNews/SK): ಬದುಕಿನಲ್ಲಿರುವ ಒಂದು ಆಸೆ ಆಕಾಂಕ್ಷೆಯನ್ನು ನಾನು ಕಳೆದುಕೊಂಡಿದ್ದೇನೆ. ನಾನು ಈ ಸ್ಥಿತಿಯಲ್ಲಿ ಜೀವನ ಸಾಗಿಸುದಕ್ಕಿಂತ ಜೈಲಿನಲ್ಲೇ ಸಾಯುವುದು ಉತ್ತಮ’ ಎಂದು ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರು ವಿಶೇಷ ನ್ಯಾಯಾಲಯದ ಮುಂದೆ ಅಳಲು ತೋಡಿಕೊಂಡರು.
ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರನ್ನು ಕೆನರಾ ಬ್ಯಾಂಕ್ಗೆ ₹538 ಕೋಟಿ ವಂಚಿಸಿದ ಆರೋಪ ಮೇಲೆ ಕಳೆದ ವರ್ಷ ಸೆಪ್ಟೆಂಬರ್ 1ರಂದು ಜಾರಿ ನಿರ್ದೇಶನಾಲಯವು (ಇ.ಡಿ) ಬಂಧಿಸಿತ್ತು. ಸದ್ಯ ಮುಂಬೈನ ಆರ್ಥರ್ ಜೈಲಿನಲ್ಲಿ ನ್ಯಾಯಾಂಗ ವಶದಲ್ಲಿರುವ ಗೋಯಲ್ ಅವರು, ಕಳೆದ ತಿಂಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಗಾಗಿ ಅವರನ್ನು ವಿಶೇಷ ನ್ಯಾಯಾಲಯದಲ್ಲಿ ಶನಿವಾರ ಹಾಜರುಪಡಿಸಲಾಗಿತ್ತು.
ಈ ಸಂದರ್ಭ ನ್ಯಾಯಾಧೀಶರ ಎದುರು ಅಳಲು ವ್ಯಕ್ತಪಡಿಸಿದ ಅವರು, ನನ್ನ ಆರೋಗ್ಯ ಕೂಡ ಹದಗೆಟ್ಟಿದೆ. ಪತ್ನಿಯು ಅಂತಿಮ ಹಂತದ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಹಾಸಿಗೆ ಹಿಡಿದಿದ್ದಾರೆ. ಏಕೈಕ ಮಗಳೂ ಸಹ ಅನಾರೋಗ್ಯ ಪೀಡಿತಳಾಗಿದ್ದಾಳೆ ಎಂದು ಬೇಸರ ವ್ಯಕ್ತಪಡಿಸಿದರು.
ನನನ್ನು ಈ ಪರಿಸ್ಥಿತಿಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯದರು ಆಸ್ಪತ್ರೆಗೆ ಹೋಗಿ ದೀರ್ಘ ಸಮಯದ ವರೆಗೆ ಸರದಿಯಲ್ಲಿ ಕಾದುನಿಲ್ಲಲು ಸದ್ಯವಿಲ್ಲ. ತಪಾಸಣೆಗಾಗಿ ಪದೇ ಪದೆ ಆಸ್ಪತ್ರೆಗೆ ಹೋಗುವುದು ಕಷ್ಟ. ಆಸ್ಪತ್ರೆಗೆ ಕರೆದೊಯ್ಯುವ ಬದಲು ಜೈಲಿನಲ್ಲೇ ಸಾಯಲು ಬಿಡಿ’ ಎಂದು ಹೇಳಿದರು.
ಇನ್ನು ಗೋಯಲ್ ಅವರ ಮಾತನ್ನು ಆಲಿಸಿದ ವಿಶೇಷ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಅವರು, ‘ನಾನು ಗೋಯಲ್ ಅವರ ಮತುಗಳನ್ನು ತಾಳ್ಮೆಯಿಂದ ಆಲಿಸಿದೆ. ಮಾತನಾಡುವಾಗ ಅವರ ಸಂಪೂರ್ಣ ದೇಹ ನಡುಗುತ್ತಿತ್ತು. ನಿಂತುಕೊಳ್ಳಲು ಅವರಿಗೆ ಸಹಾಯ ಬೇಕು. ಅವರಿಗೆ ಕಾಲು ಮಡಚಲೂ ಸಾಧ್ಯವಿಲ್ಲ’ ಎಂದರು. ಗೋಯಲ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಗೆ ಇ.ಡಿ ಪ್ರತಿಕ್ರಿಯೆ ನೀಡಿದೆ. ಮುಂದಿನ ವಿಚಾರಣೆಯನ್ನು ಜ. 16ಕ್ಕೆ ಮುಂದೂಡಲಾಗಿದೆ ಎಂದು ತಿಳಿಸಿದರು.