ದಾವಣಗೆರೆ,ಜ 7 (DaijiworldNews/PC): ಯುವ ವಿವಾಹಿತ ತನ್ನ ಪತ್ನಿಯನ್ನು ಹೆಲ್ಮೆಟ್ನಿಂದ ಹೊಡೆದು ಕೊಂದು ಬಳಿಕ ಅಪಘಾತದ ನಾಟಕವಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಮೃತಳನ್ನು ಚನ್ನಗಿರಿ ತಾಲೂಕಿನ ಸಾರಥಿ ಹೊಸೂರು ಗ್ರಾಮದ ನಿವಾಸಿ ಯಶೋದಾ ಎಂದು ಗುರುತಿಸಲಾಗಿದೆ.
ದಾವಣಗೆರೆಯ ಜಿಲ್ಲೆಯ ಚನ್ನಗಿರಿ ತಾಲೂಕಿಗ ನುಗ್ಗಿಹಳ್ಳಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು ಮೃತ ಯುವತಿ 3 ತಿಂಗಳ ಗರ್ಭಿಯಾಗಿದ್ದರು. ಆರು ತಿಂಗಳ ಹಿಂದೆ ಯಶೋದಾ ನರಗನಹಳ್ಳಿ ಗ್ರಾಮದ ತಿಪ್ಪೇಶ್ (28) ಎಂಬಾತನನ್ನ ಪ್ರೀತಿಸಿ ಮದುವೆ ಆಗಿದ್ದರು. ಜನವರಿ 4 ರಂದು ಪತಿ ಜೊತೆ ಯಶೋದಾ ತವರಿಗೆ ಬಂದಿದ್ದರು. ತವರು ಮನೆಯಿಂದ ವಾಪಸ್ ಹೋಗುವಾಗ ಬೈಕ್ ಅಪಘಾತವಾಗಿ ಯಶೋದಾ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರಿಗೆ ಪತಿ ತಿಪ್ಪೇಶ್ ಮಾಹಿತಿ ನೀಡಿದ್ದನು.
ಯಶೋದಾಳ ಶವ ನೋಡಿದ ತಂದೆಗೆ ಕೊಲೆ ಶಂಕೆ ವ್ಯಕ್ತವಾಗಿದ್ದು,ತನ್ನ ಪುತ್ರಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿಲ್ಲ ಕೊಲೆಯಾಗಿದೆ ಎಂದು ದೂರು ನೀಡಿದ್ದಾರೆ. ಬಳಿಕ ದೂರಿನ ಪ್ರಕಾರ ಪೊಲೀಸರು ತನಿಖೆ ನಡೆಸಿದಾಗ ಪತಿ ತಾನೇ ಹೊಡೆದು ಸಾಯಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.