ಕೋಲಾರ, ಜ 08 (DaijiworldNews/MS): ಮಾಲೂರು ಕಾಂಗ್ರೆಸ್ ಶಾಸಕ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ ಅವರ ಮನೆ ಮತ್ತು ಅವರಿಗೆ ಸೇರಿದ ಕಲ್ಲು ಕ್ವಾರಿ ಮತ್ತಿತರ ಕಡೆ ಸೋಮವಾರ ಇಡಿ(ಜಾರಿ ನಿರ್ದೇಶನಾಲಯ) ದಾಳಿ ನಡೆಸಿದೆ. ನಂಜೇಗೌಡ ಅವರಿಗೆ ಸೇರಿದ ನಾಲ್ಕು ಕಡೆಗಳಲ್ಲಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಮಾಲೂರಿನ ಕೊಮ್ಮನಹಳ್ಳಿಯಲ್ಲಿರುವ ಇವರ ಮನೆ, ಹುತ್ತೂರು ಹೋಬಳಿಯಲ್ಲಿರುವ ಕೋಚಿಮುಲ್ ಕಚೇರಿ ಮತ್ತು ಕೊಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಚಿಮುಲ್ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಆರೋಪ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ನಂಜೇಗೌಡ ಅವರ ಆಪ್ತ ಸಹಾಯಕ ಹರೀಶ್, ಕೋಚಿಮುಲ್ ಹಾಲು ಒಕ್ಕೂಟದ ಎಂ.ಡಿ.ಗೋಪಾಲಮೂರ್ತಿ, ಆಡಳಿತ ವಿಭಾಗದ ವ್ಯವಸ್ಥಾಪಕ ನಾಗೇಶ್ ಸೇರಿ ವಿವಿಧ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆದಿದೆ