ನವದೆಹಲಿ, ಜ 08 (DaijiworldNews/ AK): ಬಿಲ್ಕಿಸ್ ಬಾನು ಪ್ರಕರಣದಲ್ಲಿ 11 ಅಪರಾಧಿಗಳ ಬಿಡುಗಡೆಗೆ ನಿರ್ಧಾರ ಕೈಗೊಂಡಿದ್ದ ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಅಪರಾಧಿಗಳನ್ನು ಯಾರು ರಕ್ಷಿಸುತ್ತಿದ್ದಾರೆ ಎಂಬುದು ಈ ತೀರ್ಪು ತೋರಿಸಿದೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುಜರಾತ್ನಲ್ಲಿ 2002ರಲ್ಲಿ ಸಂಭವಿಸಿದ ಕೋಮು ಗಲಭೆಯಲ್ಲಿ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಹಾಗೂ ಅವರಕುಟುಂಬದ ಸದಸ್ಯರನ್ನು ಹತ್ಯೆಗೈದಿದ್ದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆಮಾಡಿತ್ತು. ಈ ಆದೇಶವನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್ , ಮುಂದಿನ 2 ವಾರದೊಳಗೆ ಅಪರಾಧಿಗಳು ಜೈಲು ಸೇರಬೇಕು ಎಂದು ಆದೇಶಿಸಿದೆ.
ಮಹಿಳೆಯೊಬ್ಬರು ಯಾವುದೇ ಮತಕ್ಕೆ ಸೇರಿರಬಹುದು ಅಥವಾ ಯಾವುದೇ ನಂಬಿಕೆಯನ್ನು ಅನುಸರಿಸುತ್ತಿರಬಹುದು. ಆದರೆ ಅವರ ಮೇ ಲೆ ಘೋರ ಅಪರಾಧ ನಡೆಸಿದವರಿಗೆ ಕ್ಷಮಾಪಣೆ ನೀಡಲು ಸಾಧ್ಯವೇ ’ ಎಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾ. ಉಜ್ಜಲ್ ಭುಯಾನ್
ಅವರಿದ್ದ ಪೀಠವು ಗುಜರಾತ್ ಸರ್ಕಾರದ ವಿರುದ್ಧ ಪ್ರಶ್ನಿಸಿತ್ತು.
ಈ ಕುರಿತು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ, ‘ಚುನಾವಣಾ ಲಾಭಕ್ಕಾಗಿ ನ್ಯಾಯದ ಕೊಲೆಗೈಯ್ಯುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಅಪರಾಧಿಗಳಿಗೆ ಯಾರು ನೆರವಾಗುತ್ತಿದ್ದಾರೆ ಎಂಬುದನ್ನು ಸುಪ್ರೀಂ ಕೋ ರ್ಟ್ ನ ಇಂದಿನ ತೀರ್ಪು ಸಾಬೀತುಪಡಿಸಿದೆ. ಬಿಲ್ಕಿಸ್ ಬಾನು ಅವರ ಈ ದಣಿವರಿಯದ ಪ್ರಯತ್ನವು ದುರಹಂಕಾರಿ ಬಿಜೆಪಿ ಸರ್ಕಾರದ ವಿರುದ್ಧದ ನ್ಯಾಯದ ಗೆಲುವಾಗಿದೆ ಎಂದರು.
2002ರಲ್ಲಿ ಘಟನೆ ನಡೆಯುವಾಗ ಬಿಲ್ಕಿಸ್ ಬಾನೂ 21 ವರ್ಷ ದವರಾಗಿದ್ದರು. 5 ತಿಂಗಳ ಗರ್ಭಿಣಿಯಾಗಿದ್ದರು. ಅದೇ ವರ್ಷ ಫೆಬ್ರುವರಿಯಲ್ಲಿ ಗೋಧ್ರಾ ರೈಲಿನ ಅಗ್ನಿ ದುರಂತದ ನಂತರ ಬುಗಿಲೆದ್ದ ಕೋಮು ಗಲಭೆಯಲ್ಲಿ ಬಿಲ್ಕಿಸ್ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅವರ ಮೂರು ವರ್ಷದ ಮಗಳು ಸಹಿತ ಕುಟುಂಬದ ಏಳು ಜನರನ್ನು ಹತ್ಯೆ ಮಾಡಲಾಗಿತ್ತು. ಇದರಲ್ಲಿ ಭಾಗಿಯಾಗಿದ್ದ 11 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿತ್ತು. ಆದರೆ 2022ರ ಆಗಸ್ಟ್ 15ರಂದು ಗುಜರಾತ್ ಸರ್ಕಾರ ಈ 11ಮಂದಿ ಆರೋಪಿಗಳನ್ನು ಬಿಡುಗಡೆಗೊಳಿಸಿ ಆದೇಶಿಸಿತ್ತು.