ಗೋವಾ, ಜ 09 (DaijiworldNews/MS): ಹೈ ಪ್ರೊಫೈಲ್ ಹಿನ್ನಲೆ ಹೊಂದಿರುವ ಸಿಇಒ ತನ್ನ ನಾಲ್ಕು ವರ್ಷದ ಮಗುವನ್ನು ಕೊಂದು ಚೀಲದಲ್ಲಿ ಹಾಕಿ ಗೋವಾದಿಂದ ಬೆಂಗಳೂರಿಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದ ಭೀಕರ ಘಟನೆ ನಡೆದಿದೆ. ಇಡೀ ಪ್ರಕರಣ ಸಿನಿಮೀಯದಂತಿದೆ.
ಬೆಂಗಳೂರು ಮೂಲದ ಹೈ ಪ್ರೊಫೈಲ್ಸ್ ಉದ್ಯಮಿ ಮತ್ತು ಸ್ಟಾರ್ಟಪ್ ಸಂಸ್ಥೆಯಾಗಿರುವ ಮೈಂಡ್ಫುಲ್ ಅಲ್ ಲ್ಯಾಬ್ ನ ಸಿಇಒ ಸುಚನಾ ಸೇತ್(39) ಅವರನ್ನು ಕರ್ನಾಟಕದ ಚಿತ್ರದುರ್ಗದಲ್ಲಿ ಬಂಧಿಸಲಾಗಿದ್ದು, ಗೋವಾ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆಕೆಯ ಲಿಂಕ್ಡಿನ್ ಪ್ರೊಫೈ ಲಿನಲ್ಲಿ ಆಕೆ “ಎಐ ಎಥಿಕ್ಸ್ ಎಕ್ಸ್ಪರ್ಟ್ ಮತ್ತು AI ethics expert and on the list of 100 brilliant women in the AI ethics list” ಎಂದು ನಮೂದಿಸಲಾಗಿದೆ.
ಬೆಂಗಳೂರಿನಿಂದ ವಿಮಾನದ ಮೂಲಕ ಗೋವಾಕ್ಕೆ ಬಂದಿದ್ದ ಸುಚನಾ ಸೇತ್ ಉತ್ತರ ಗೋವಾದ ಕ್ಯಾಂಡೋಲಿಂನಲ್ಲಿರುವ ಹೊಟೇಲೊಂದರಲ್ಲಿ ಜನವರಿ 6 ರಂದು ತಡರಾತ್ರಿ ತನ್ನ ನಾಲ್ಕು ವರ್ಷದ ಮಗನೊಂದಿಗೆ ಚೆಕ್-ಇನ್ ಮಾಡಿದ್ದಾರೆ. ಆದರೆ ಜ.9 ಸೋಮವಾರ ಬೆಳಗ್ಗೆ ಚೆಕ್ ಔಟ್ ಮಾಡಿದಾಗ ಮಗು ಅವಳ ಜೊತೆ ಇಲ್ಲದನ್ನುಸಿಬ್ಬಂದಿ ಗಮನಿಸಿದ್ದಾರೆ.
ಸೋಮವಾರ ಆಕೆ ಆತುರವಾಗಿ ಚೆಕ್ ಔಟ್ ಮಾಡಲು ಬಯಸಿದ್ದು , ಹೊಟೇಲ್ ರಿಸೆಪ್ಷನಿಸ್ಟ್ ಬಳಿ ಬೆಂಗಳೂರಿಗೆ ಟ್ಯಾಕ್ಸಿ ಬುಕ್ ಮಾಡಲು ತಿಳಿಸಿದ್ದಾರೆ. ಟ್ಯಾಕ್ಸಿ ದರಕ್ಕಿಂತ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಸಿಗುತ್ತಿದೆ ಎಂಬ ಅವರ ಹೊಟೇಲ್ ರಿಸೆಪ್ಷನಿಸ್ಟ್ ಸಲಹೆ ನಿರಾಕರಿಸಿ ಟ್ಯಾಕ್ಸಿಗೆ ಬುಕ್ ಮಾಡಲು ಒತ್ತಾಯಿಸಿ ಬಳಿಕ ಟ್ರಾಲಿ ಬ್ಯಾಗ್ ನೊಂದಿಗೆ ತೆರಳಿದ್ದಾಳೆ. ಇನ್ನೊಂದೆಡೆ ಹೊಟೇಲ್ ರೂಂ ಸ್ವಚ್ಚಗೊಳಿಸಲು ರೂಮ್ ಬಾಯ್ ತೆರಳಿದಾಗ ಕೆಲವೆಡೆ ರಕ್ತದ ಕಲೆ ಕಂಡುಬಂದಿದ್ದು, ಹೊಟೇಲ್ ಸಿಬ್ಬಂದಿ ತಕ್ಷಣ ವಿಚಾರವನ್ನು ಪೊಲೀಸರಿಗೆ ತಲುಪಿಸಿದ್ದಾರೆ. ಕ್ಯಾಲಂಗುಟ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪರೇಶ್ ನಾಯಕ್ ತಂಡ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ರಕ್ತದ ಕಲೆಯ ಬಗ್ಗೆ ಮಾಹಿತಿ ಪಡೆದು ಹೋಟೆಲ್ಗೆ ತಲುಪಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದು ಮಗು ಆಕೆಯೊಂದಿಗೆ ಇಲ್ಲದಿರುವುದು ದೃಡಪಟ್ಟಿದೆ.
ಟ್ಯಾಕ್ಸಿಯಲ್ಲಿ ತೆರಳುತ್ತಿದ್ದಂತೆ ಸುಚನಾಳಿಗೆ ತಕ್ಷಣ ಕರೆ ಮಾಡಿದ ಪೊಲೀಸರು ಆಕೆಯ ಮಗನ ಬಗ್ಗೆ ವಿಚಾರಿಸಿದ್ದಾರೆ. ಆಕೆ ಯಾವುದೇ ಅನುಮಾನ ಬಾರದಂತೆ ತನ್ನ ಮಗು ಫಟೋರ್ಡಾದಲ್ಲಿ ತನ್ನ ಸ್ನೇಹಿತ ಮನೆಯಲ್ಲಿದ್ದಾಳೆಂದು ಸುಳ್ಳು ವಿಳಾಸವನ್ನು ನೀಡಿದ್ದಾಳೆ ತಡ ಮಾಡದ ಪೊಲೀಸರು ವಿಳಾಸ ಪರಿಶೀಲಿಸಿದಾಗ ಅದು ನಕಲಿಯಾಗಿತ್ತು. ಮತ್ತಷ್ಟು ಅನುಮಾನಗೊಂಡ ಇನ್ಸ್ಪೆಕ್ಟರ್ ಪರೇಶ್ ನಾಯಕ್ ಟ್ಯಾಕ್ಸಿ ಡ್ರೈವರ್ಗೆ ಮತ್ತೆ ಕರೆ ಮಾಡಿ, ಈ ಬಾರಿ ಕೊಂಕಣಿಯಲ್ಲಿ ಮಾತನಾಡುತ್ತಾ, ಪ್ರಯಾಣಿಕೆಗೆ ಅನುಮಾನ ಬಾರದಂತೆ ಹತ್ತಿರದ ಪೊಲೀಸ್ ಠಾಣೆಗೆ ಹೋಗುವಂತೆ ತಿಳಿಸಿದ್ದಾರೆ.
ಅಷ್ಟರಲ್ಲಾಗಲೇ ಟ್ಯಾಕ್ಸಿ ಚಿತ್ರದುರ್ಗ ಜಿಲ್ಲೆಯನ್ನು ಪ್ರವೇಶಿಸಿತ್ತು. ಡ್ರೈವರ್ ಸುಚನಾಗೆ ತಿಳಿಯದಂತೆ ಕಾರನ್ನು ಐಮಂಗಲ ಪೊಲೀಸ್ ಠಾಣೆಗೆ ತಿರುಗಿಸಿದ್ದಾನೆ. ಈ ವೇಳೆ ಅಲ್ಲಿದ್ದ ಪೊಲೀಸ್ ಅಧಿಕಾರಿ ಕಾರಿನಲ್ಲಿದ್ದ ಬ್ಯಾಗ್ನ್ನು ಪರಿಶೀಲಿಸಿದಾಗ ನಾಲ್ಕು ವರ್ಷದ ಮಗುವಿನ ಶವ ಕಂಡು ಬೆಚ್ಚಿಬಿದ್ದಿದ್ದಾರೆ.
ಸೋಮವಾರ ಸಂಜೆಯೇ ಪೊಲೀಸ್ ಪರೇಶ್ ನಾಯಕ್ ಅವರು ತಮ್ಮ ತಂಡದೊಂದಿಗೆ ಚಿತ್ರದುರ್ಗಕ್ಕೆ ಆಗಮಿಸಿ ಆರೋಪಿ. ತಾಯಿಯನ್ನು ಬಂಧಿಸಿ ಗೋವಾಕ್ಕೆ ಕರೆದೊಯ್ದಿದ್ದಾರೆ.
ವಿಚ್ಚೇದಿತ ಪತಿ ಮಗುವಿನ ಜತೆ ಮಾತನಾಡಬಾರದು ಎಂಬ ಕಾರಣಕ್ಕಾಗಿ ಸುಚನಾ ಮಗುವಿನ ಹತ್ಯೆಗೈದಿರುವುದಾಗಿ ತಿಳಿದು ಬಂದಿದೆ. 2010ರಲ್ಲಿ ವಿವಾಹವಾಗಿದ್ದ ದಂಪತಿಗೆ 2019ರಲ್ಲಿ ಗಂಡು ಮಗು ಜನಿಸಿತ್ತು. ಇಬ್ಬರ ನಡುವಿನ ವಿರಸದಿಂದಾಗಿ 2020ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ಆದರೆ ಪ್ರತಿ ಭಾನುವಾರ ಮಗುವನ್ನು ಭೇಟಿಯಾಗಲು ತಂದೆಗೆ ಕೋರ್ಟ್ ಅನುಮತಿ ನೀಡಿತ್ತು.