ಬೆಂಗಳೂರು, ಜ 9 ( DaijiworldNews/AK): ವಿಪಕ್ಷಗಳ ‘ಇಂಡಿ’ (ಐಎನ್ಡಿಐ) ಒಕ್ಕೂಟಕ್ಕೆ ಸಂಚಾಲಕರನ್ನೇ ಆಯ್ಕೆ ಮಾಡಲಾಗುತ್ತಿಲ್ಲ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂಡಿ ಒಕ್ಕೂಟವು ಅಸ್ತಿತ್ವದಲ್ಲೇ ಇಲ್ಲ. ಆರಂಭದಲ್ಲಿ ಅದು ಪ್ರಧಾನಿ ಸ್ಥಾನಕ್ಕೆ ಹಲವಾರು ಹೆಸರುಗಳನ್ನು ಪ್ರಸ್ತಾಪ ಮಾಡಿತ್ತು. ಬಳಿಕ ಅವರು ಪರಸ್ಪರರನ್ನು ಸೂಚಿಸಿದರು. ಇನ್ನೊಂದೆಡೆ ಅವರಿಗೆ ಸ್ಥಾನ ಹಂಚಿಕೆ ಕಡೆಗೇ ಗಮನ ಕೊಡಲು ಅವರಿಗೆ ಸಾಧ್ಯವಾಗಿಲ್ಲ ಎಂದು ವ್ಯಂಗ್ಯವಾಡಿದರು.
ಭಾರತದ ಸಮಗ್ರ ಬೆಳವಣಿಗೆ ಶೇ 5ರಷ್ಟೇ ಇರುತ್ತದೆ ಎಂದು ಕಾಂಗ್ರೆಸ್ಸಿಗರು ಹೇಳಿದ್ದರು. ಆದರೆ, ಅದು ಶೇ 7.6 ಕ್ಕೂ ಹೆಚ್ಚು ಇರುವುದನ್ನು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅವರು ಹತಾಶರಾಗಿದ್ದಾರೆ ಎಂದು ಅವರು ಉತ್ತರಿಸಿದರು.
ಜಗತ್ತಿನೆಲ್ಲೆಡೆ ಪೆಟ್ರೋಲಿಯಂ ಉತ್ಪನ್ನಗಳ ದರ ಏರುತ್ತಿದೆ. ಮೋದಿಜೀ ಅವರು ಎರಡು ಬಾರಿ ಪೆಟ್ರೋಲಿಯಂ ಉತ್ಪನ್ನಗಳ ಎಕ್ಸೈಸ್ ಸುಂಕವನ್ನು ಕಡಿಮೆ ಮಾಡಿದ್ದಾರೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಳೆದ 2 ವರ್ಷಗಳಲ್ಲಿ ಕಡಿಮೆ ಆಗಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತಿತರ ಕಡೆ ಇದಕ್ಕೆ ಕಾಂಗ್ರೆಸ್ಸಿಗರಿಗೆ ಸೂಕ್ತ ಉತ್ತರ ಸಿಕ್ಕಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.