ಬೆಂಗಳೂರು, ಜ 10 (DaijiworldNews/ AK):ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ , ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣೆ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಲೋಕಸಭೆಗೆ ನಾನು ಸ್ಪರ್ಧಿಸುವುದಿಲ್ಲ. ನಾನು ಲೋಕಸಭೆ ಟಿಕೆಟ್ ಆಕಾಂಕ್ಷಿ ಸಹ ಅಲ್ಲ. ನನ್ನ ಅಭಿಪ್ರಾಯ ಈಗಾಗಲೇ ಸ್ಪಷ್ಟವಾಗಿ ಸಾಕಷ್ಟು ಬಾರಿ ಹೇಳಿದ್ದೇನೆ. ಹೇಳಿಕೆಯನ್ನು ಬದಲಾಯಿಸುವ ವ್ಯಕ್ತಿ ನಾನಲ್ಲ ಎಂದರು.
ಮಂಡ್ಯ ಜಿಲ್ಲೆಯಿಂದಲೂ ನಾನು ಲೋಕಸಭಾ ಚುನಾವಣೆಯ ಟಿಕೆಟ್ ಆಕಾಂಕ್ಷಿ ಅಲ್ಲ. ಈ ವಿಚಾರವಾಗಿ ಗುರುವಾರ ಮಂಡ್ಯ ಜಿಲ್ಲೆಯಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ನಮ್ಮ ನಾಯಕರು, ಯಾರು ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಲಿದ್ದಾರೆ. ಈಗಾಗಲೇ ಈ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ.
ಹಿರಿಯರಾದ ದೇವೇಗೌಡರು, ಕುಮಾರಸ್ವಾಮಿ ಹಾಗೂ ಮಂಡ್ಯ ನಾಯಕರು ಕುಳಿತು ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ನಮ್ಮ ನಾಯಕರ ಜೊತೆಗೆ ಬಿಜೆಪಿ ಅಭ್ಯರ್ಥಿಗಳು, ಕಾರ್ಯಕರ್ತ ಭಾವನೆಗಳನ್ನು ಕಲೆ ಹಾಕಿ ಅಂತಿಮವಾಗಿ ಅಭ್ಯರ್ಥಿಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು