ಹಾಸನ,ಜ 12(DaijiworldNews/AK): ಕಾಡಾನೆ ಹಾವಳಿ ನಿಯಂತ್ರಣಕ್ಕೆ ಇದೀಗ ಮತ್ತೆ ಹಾಸನ ಜಿಲ್ಲೆಯಲ್ಲಿ ಕಾರ್ಯಾಚರಣೆ ಆರಂಭವಾಗಿದೆ. ಗುರುವಾರದಿಂದ ಆರಂಭವಾಗಿರುವ ಕಾರ್ಯಾಚರಣೆ ಇದೀಗ ದಸರಾ ಆನೆ ಅಭಿಮನ್ಯು ಎಂಟ್ರಿಯಾಗಿದೆ. ಒಟ್ಟು ಎಂಟು ಸಾಕಾನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ಶುಕ್ರವಾರ ಬೆಳಗ್ಗೆಯೇ ಆರಂಭವಾಗಿದೆ.
ಡಿ. 4ರಂದು ಕಾಡಾನೆ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ್ ಕಾಡಾನೆ ದಾಳಿಯಿಂದ ಗಾಯಗೊಂಡು ಮೃತಪಟ್ಟಿತ್ತು. ಬಳಿಕ ಕಾಡಾನೆ ಸೆರೆ ಕಾರ್ಯಾಚರಣೆಗೆ ತಾತ್ಕಾಲಿಕ ಸ್ಥಗಿತಗೊಂಡಿತ್ತು. ಆದರೆ, ಅರ್ಜುನನ ಬಲಿ ಪಡೆದ ಆನೆ ಸೆರೆಹಿಡಿಯಲು ಜನ ಒತ್ತಾಯಿಸಿದ್ದರು.
ಕಾಡಾನೆ ಸೆರೆಗೆ ಕರೆತಂದಿರುವ ಸಾಕಾನೆಗಳು ಇದೀಗ ಬೇಲೂರು ತಾಲ್ಲೂಕಿನ ಬಿಕ್ಕೋಡು ಸಮೀಪದ ತಾತ್ಕಾಲಿಕ ಆನೆ ಶಿಬಿರಕ್ಕೆ ಬಂದಿವೆ. ಅಭಿಮನ್ಯು, ಪ್ರಶಾಂತ, ಹರ್ಷ, ಅಶ್ವತ್ಥಾಮ, ಸುಗ್ರೀವ, ಧನಂಜಯ, ಭೀಮ, ಮಹೇಂದ್ರ ಆನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಬಿಕ್ಕೋಡು ಸಮೀಪದ ತಾತ್ಕಾಲಿಕ ಆನೆ ಶಿಬಿರದಲ್ಲಿ ಸಾಕಾನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು.