ಬೆಂಗಳೂರು, ಜ 11 (DaijiworldNews/MS): ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಇಂದು ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಹಾಕಿ ಬರೆದಿರುವ ಸಾಲುಗಳು ಭಾರೀ ವೈರಲ್ ಆಗಿದೆ.
ಕುಮಾರಸ್ವಾಮಿಯನ್ನು ಭೇಟಿ ಮಾಡಿರುವ ಪ್ರತಾಪ್ ಸಿಂಹ, ಅವರ ಕಾಲಿಗೆ ನಮಸ್ಕರಿಸಿ ಕಷ್ಟಕಾಲದಲ್ಲಿ ಸತ್ಯಸಂಗತಿಯನ್ನು ಜನರ ಮುಂದಿಟ್ಟು ಬೆನ್ನಿಗೆ ನಿಂತ ನಿಮಗೆ ಧನ್ಯವಾದ ಕುಮಾರಣ್ಣ ಎಂದು ಹೇಳಿ ಸೋಷಿಯಲ್ ಮೀಡಿಯಾದಲ್ಲಿ ಕೂಡ ಈ ವಿಚಾರ ಹಂಚಿಕೊಂಡಿದ್ದಾರೆ.
ಸಂಸದ ಪ್ರತಾಪ್ ಸಿಂಹ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರನ್ನು ಇಂದು ಬೆಳಗ್ಗೆ ಅವರ ಬಿಡದಿ ತೋಟದ ಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಸಿಎಂ ಆಗಿದ್ದ ಕುಮಾರಸ್ವಾಮಿಯವರನ್ನುಒಂದು ಕಾಲದಲ್ಲಿ ಪ್ರತಾಪ್ ಸಿಂಹ ಪದೇಪದೆ ತಮ್ಮ ಟ್ವೀಟ್ ಗಳ ಮೂಲಕವೇ ದಾಳಿ ನಡೆಸುತ್ತಿದ್ದರು. ಇದಕ್ಕೆ ಕುಮಾರಸ್ವಾಮಿ ಅದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದರು. ಲೋಕಸಭಾ ಚುನಾವಣೆಗಾಗಿ ಜೆಡಿಎಸ್- ಬಿಜೆಪಿ ದೋಸ್ತಿಯಾಗಿರುವ ಹಿನ್ನಲೆಯಲ್ಲಿ ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆತಿದ್ದಾರೆ.