ಬೆಂಗಳೂರು, ಜ 12(DaijiworldNews/AA): ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸೋತರೆ ರಾಜ್ಯದ ಸಚಿವರನ್ನು ತಲೆದಂಡ ಮಾಡಲಾಗುತ್ತದೆ ಎಂಬ ಎಚ್ಚರಿಕೆಯನ್ನು ಹೈಕಮಾಂಡ್ ನೀಡಿರುವುದಾಗಿ ಗೃಹಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇನ್ನು ಎರಡು ಮೂರು ದಿನಗಳಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಬರುವ ಸಾಧ್ಯತೆ ಇದೆ. ಅಭ್ಯರ್ಥಿಗಳ ಕುರಿತು ಅಥವಾ ಸಚಿವರ ಸ್ಪರ್ಧೆ ವಿಚಾರವಾಗಿ ಅವರು ಮಾತನಾಡಿಲ್ಲ. ಜವಾಬ್ದಾರಿಯುತವಾಗಿ ಚುನಾವಣೆಗೆ ಪ್ರಚಾರ ಮಾಡಲು ಹೇಳಿದ್ದಾರೆ. ಚುನಾವಣೆಯಲ್ಲಿ ಸೋತರೆ ಸಚಿವರ ತಲೆದಂಡ. ಗೆಲ್ಲುವಂತಹ ಕ್ಷೇತ್ರವನ್ನು ಸೋತರೆ ಸರಿಯಾಗಿ ಕೆಲಸ ಮಾಡಿಲ್ಲವೆಂದು ಅರ್ಥ. ನೀವೆಲ್ಲರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದಲ್ಲಿ ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ ಎಂದರು.
ಇನ್ನು ದೆಹಲಿಯಲ್ಲಿ ನಡೆದ ಸಂಯೋಜಕರ ಸಭೆಯಲ್ಲಿ ಭಾಗಿಯಾದ ವಿಚಾರವಾಗಿ ಮಾತನಾಡಿದ ಸಚಿವರು, ನಮ್ಮೆಲ್ಲರನ್ನು ಎಐಸಿಸಿ ಅಧ್ಯಕ್ಷರು ಲೋಕಸಭಾ ಚುನಾವಣೆಗೆ ತಯಾರಿ ನಡೆಸುವ ಉದ್ದೇಶದಿಂದ ಕರೆಸಿದ್ದರು. ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯದವರನ್ನು ಕೂಡ ಕರೆಸಿದ್ದರು. ದೇಶದಲ್ಲಿರುವ ಒಟ್ಟು 5 ಕ್ಲಷ್ಟರ್ ಗಳ ಪೈಕಿ ಕರ್ನಾಟಕ ಕೂಡ ಒಂದು ಕ್ಲಷ್ಟರ್ ಎಂದು ಹೇಳಿದರು.