ನವದೆಹಲಿ, ಜ 13 (DaijiworldNews/AA): ಬಿಜೆಪಿ ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ? ಅಥವಾ ಅವರಿಗೆ ಜಾಗೀರು ಕೊಟ್ಟಿದ್ದೀವಾ? ನಾವು ಹಿಂದೂಗಳು ಅಲ್ಲದೇ ಇನ್ನೇನು? ಎಂದು ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ.
ಸಿ ಎಂ ಸಿದ್ದರಾಮಯ್ಯ ಅವರ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡುವ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಜ. 22 ರ ನಂತರ ರಾಮಮಂದಿರಕ್ಕೆ ಭೇಟಿ ನೀಡುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಸರಿಯಾಗಿದೆ. ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿದರೆ ತಪ್ಪೇನು? ರಾಮಮಂದಿರ ಬಿಜೆಪಿ ನಾಯಕರ ಸ್ವತ್ತೆ? ಈ ಹಿಂದೆ ಹೇಳಿರುವುದೂ ಸರಿ ಇದೆ. ಈಗ ಹೇಳುವುದು ಕೂಡ ಸರಿಯಾಗಿಯೇ ಇದೆ ಎಂದು ಸಿದ್ದಯಾಮಯ್ಯ ಅವರ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರು.
ಮತಕ್ಕಾಗಿ ಬಿಜೆಪಿ ಪದೇ ಪದೆ ಹಿಂದೂ ಹಿಂದೂ ಎಂದು ಹೇಳುತ್ತದೆ. ಅಂಬೇಡ್ಕರ್ ತಾನು ಹಿಂದೂವಾಗಿ ಸಾಯುವುದಿಲ್ಲ ಎಂದು ಹೇಳಿದ್ದರು ಯಾಕೆ? ಈ ರೀತಿಯ ಹಿಂದುತ್ವ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡರು ಎಂಬ ಕಾರಣದಿಂದ ವಿಮುಖರಾದರು ಎಂದು ಹೇಳಿದರು.
ಬಿಜೆಪಿ ಈ ರೀತಿಯೆಲ್ಲ ಮಾತನಾಡುವ ಬದಲು ಮೊದಲು ರಾಮಮಂದಿರಕ್ಕೆ ದಲಿತರನ್ನು ಬಿಡಲು ಹೇಳಿ. ಅಲ್ಲಿ ಒರ್ವ ದಲಿತ ಅರ್ಚಕನನ್ನು ನೇಮಿಸಲು ಹೇಳಿ. ಹಿಂದೂಗಳಿಗೆ ಅವರು ಏನು ಮಾಡಿದ್ದಾರೆ? ಬರೀ ಚುನಾವಣೆಗೋಸ್ಕರ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು.