ಬೆಂಗಳೂರು, ಜ 13 (DaijiworldNews/AA): ರಾಜ್ಯದಲ್ಲಿ ಏನಾದರೂ ಅಹಿತಕರ ಘಟನೆಗಳು ನಡೆದರೆ ಅನಂತಕುಮಾರ್ ಜವಾಬ್ದಾರಿ ಆಗುತ್ತಾರೆ. ಬೇರೆಯವರನ್ನು ಹೊಣೆ ಮಾಡಲ್ಲ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದಲ್ಲಿ ಚಿನ್ನದ ಪಳ್ಳಿಯೂ ಆಗಲಿದೆ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಅನಂತಕುಮಾರ್ ಅವರ ಮೇಲೆ ಪ್ರಕರಣ ದಾಖಲಿಸಲು ನಾನೇನು ಪೊಲೀಸರಿಗೆ ಸೂಚನೆ ನೀಡಿಲ್ಲ. ಪೊಲೀಸರಿಗೆ ಅವರ ಕೆಲಸವೇನು ಎಂದು ತಿಳಿದಿದೆ, ಅವರು ಮಾಡುತ್ತಾರೆ. ಅವರ ವಿರುದ್ಧ ಕಾನೂನಿನಡಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಕೇಂದ್ರದಲ್ಲಿ ಸಚಿವರಾಗಿದ್ದ ಅವರು ಜವಬ್ದಾರಿಯುತವಾಗಿ ಮಾತನಾಡಬೇಕು. ಇಂತಹ ಹೇಳಿಕೆಯನ್ನು ಯಾರೂ ಒಪ್ಪುವುದಿಲ್ಲ ಎಂದರು.
ಶಾಂತಿ ಕದಡುವಂತೆ ಹೇಳಿಕೆ ನೀಡುವುದು ಸರಿನಾ ಎಂದು ನೀವೇ ಯೋಚಿಸಿ ಎಂದು ಅನಂತಕುಮಾರ್ ಅವರನ್ನು ಪ್ರಶ್ನಿಸಿದರು. ಪ್ರಚೋದನೆಯಿಂದ ಅನಾಹುತ ನಡೆದರೆ ಯಾರು ಹೊಣೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಯಾರು ಪ್ರೇರೇಪಿಸಿದ್ದಾರೋ ಗೊತ್ತಿಲ್ಲ. ರಾಮನೇ ಅವರಿಗೆ ಒಳ್ಳೆಯ ಮನಸ್ಸನ್ನು ಕೊಡಲಿ ಎಂದರು.
ಇನ್ನು ಕಳೆದ 3 ವರ್ಷಗಳಿಂದ ಅನಂತಕುಮಾರ್ ಅವರು ಏನು ಮಾತನಾಡಿರಲಿಲ್ಲ. ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈಗ ಲೋಕಸಭೆ ಚುನಾವಣೆ ಬರುತ್ತಿದ್ದು, ಈಗ ಹೇಳಿಕೆ ನೀಡುತ್ತಿದ್ದಾರೆ. ಆ ಕುರಿತು ನಮಗೆ ತಕರಾರಿಲ್ಲ. ಆದರೆ ಅವಹೇಳನಕಾರಿಯಾಗಿ ಮಾತನಾಡುವುದು, ಬೇರೆಯವರನ್ನು ನಿಂದಿಸುವುದು, ಅಸಂಬದ್ಧವಾಗಿ, ಪ್ರಚೋದಕಾರಿಯಾಗಿ ಹೇಳಿಕೆ ನೀಡುವುದು ಇವೆಲ್ಲವನ್ನು ನಾವು ಗಮನಿಸುತ್ತಿದ್ದೇವೆ ಎಂದು ಹೇಳಿದರು.