ಮಹರಾಷ್ಟ್ರ, ಜ 14 (DaijiworldNews/AA): ಸಾಮಾನ್ಯವಾಗಿ ಮಕ್ಕಳಲ್ಲಿ ಅನೇಕ ಪ್ರತಿಭೆಗಳಿರುತ್ತವೆ. ಆದರೆ ಕೆಲವರು ಮಾತ್ರ ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಆ ಪ್ರತಿಭೆಯ ಮೂಲಕ ಸಾಧನೆ ಮಾಡುತ್ತಾರೆ. ಕೆಲವರು ಸಣ್ಣದಿರುವಾಗ ಅತ್ಯಂತ ಪ್ರತಿಭಾನ್ವಿತರಾಗಿರುತ್ತಾರೆ. ಅಂತೆಯೇ ಅವಿಷ್ಕಾರದ ಹಾಗೂ ಶ್ರೇಷ್ಟತೆಯ ಮೂಲಕ ತನ್ನ ಹಾದಿಯಲ್ಲಿ ಬಲವಾಗಿ ಸಾಗುತ್ತಿರುವ ಭಾರತದ ಪ್ರತಿಭಾವಂತ ಬಾಲ ವಿಜ್ಞಾನಿ ಶ್ರೀನಾಬ್ ಅಗರವಾಲ್ ಅವರ ಕಥೆ ಇದು.
ಮೂಲತಃ ಮಹರಾಷ್ಟ್ರದ ನಾಗ್ಪುರ ಶ್ರೀನಾಬ್ ಅಗರವಾಲ್ ಅವರ ತಂದೆ ಡಾ. ಮೌಜೇಶ್ ಅಗರವಾಲ್ ಹಾಗೂ ತಾಯಿ ಟಿನು ಅಗರವಾಲ್. ಶ್ರೀನಾಬ್ ಅವರ ತಾಯಿ ಟಿನು ಅಗರವಾಲ್ ಪ್ರತಿಭೆಯನ್ನು ಮೊದಲು ಗುರುತಿಸಿ, ಪ್ರೋತ್ಸಾಹ ನೀಡಿದರು. ಟಿನು ಅವರು ಮಗನ ಸಾಧನೆಗೆ ಬೇಕಾದ ಎಲ್ಲಾ ಪೂರಕ ವ್ಯವಸ್ಥೆಯನ್ನು ಮಾಡಿಕೊಡುತ್ತಿದ್ದರು. 'ಥ್ಯಾಂಕ್ಯೂ, ಮೋದಿ ಜೀ' ಎಂಬ ಹೆಸರಿನ ಪುಸ್ತಕವನ್ನು ಬರೆದಿದ್ದಕ್ಕಾಗಿ 2015 ರ ನವೆಂಬರ್ 22 ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನೊಂದಿಗೆ ದಾಖಲೆ ನಿರ್ಮಿಸಿದ್ದಕ್ಕಾಗಿ ಶ್ರೀನಾಬ್ ಅವರನ್ನು ಗೌರವಿಸಲಾಗಿತ್ತು.
ಶ್ರೀನಾಬ್ ಅವರು ಭಾರತೀಯ ಗಣಿತ ಶಿಕ್ಷಕರ ಸಂಘ ನಡೆಸಿದ ’ಗಾಸ್ ಸ್ಪರ್ಧೆ’ ಸೇರಿ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವರ ತಾಯಿ ಪ್ರೋತ್ಸಾಹ ನೀಡುತ್ತಿದ್ದರು. ಯುವ ಆವಿಷ್ಕಾರಕ ಶ್ರೀನಾಬ್ ಅವರು ಐಸಿಎಸ್ ಇ ಟಾಪರ್ ಆಗಿದ್ದು, 18 ವರ್ಷದೊಳಗಿನವರ ಅತ್ಯುನ್ನತ ನಾಗರಿಕ ಗೌರವವಾದ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿಯನ್ನು ಸಹ ಪಡೆದಿರುತ್ತಾರೆ. ಶ್ರೀನಾಬ್ ಅವರು ಏಸ್ ವಿದ್ಯಾರ್ಥಿಯಾಗಿದ್ದು, ಕೇವಲ 12 ವರ್ಷದವನಾಗಿದ್ದಾಗಲೇ ಎಲ್ಲರ ಗಮನನವನ್ನು ತನ್ನತ್ತ ಸೆಳೆದಿದ್ದರು. ಶ್ರೀನಾಬ್ ಅವರು 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ಹೊತ್ತಿಗೆ ಸುಮಾರು 3,000 ಪುಸ್ತಕಗಳೊಂದಿಗೆ ದೊಡ್ಡ ಗ್ರಂಥಾಲಯವನ್ನೇ ನಿರ್ಮಿಸಿದ್ದರು. ಬಳಿಕ ಅವರು ಬೋರ್ಡ್ ಪರೀಕ್ಷೆಯಲ್ಲಿ ಶೇಕಡಾ 99.2 ಅಂಕಗಳಿಸುವುದರೊಂದಿಗೆ 3 ನೇ ಅಖಿಲ ಭಾರತ ರ್ಯಾಂಕ್ ಕೂಡ ಗಳಿಸುತ್ತಾರೆ. ಜೊತೆಗೆ ಶ್ರೀನಾಬ್ ಅವರು ಚಂದಾ ದೇವಿ ಸರಾಫ್ (ಸಿಡಿಎಸ್) ಪ್ರೌಢಶಾಲೆಯ ವಿದ್ಯಾರ್ಥಿಯಾಗಿ ಮಹಾರಾಷ್ಟ್ರದ ವಿದರ್ಭ ಪ್ರದೇಶದಿಂದ ರ್ಯಾಂಕ್ ಪಡೆದವರಲ್ಲಿ ಮೊದಲಿಗರಾಗಿದ್ದರು.
ಬಳಿಕ ಅವರು ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನೆ (ಕೆವಿಪಿವೈ) ಎಸ್ಎ (11 ನೇ ತರಗತಿ) ಪರೀಕ್ಷೆಯಲ್ಲಿ 136 ನೇ ಅಖಿಲ ಭಾರತ ರ್ಯಾಂಕ್ ಗಳಿಸುತ್ತಾರೆ. ಶ್ರೀನಾಬ್ ಅವರು 10ನೇ ತರಗತಿ ಓದುತ್ತಿರುವಾಗ ಗ್ರೇಡ್ 9-12 ಟಾರ್ಗೆಟ್-ಯುರೋಪಾದಲ್ಲಿ 2018-2019 ನೇ ಸಾಲಿನ ಒಂದು ದಿನದ ವಿಜ್ಞಾನಿ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ಗೆದ್ದಿದ್ದು, ಅವರಿಗೆ ನಾಸಾದಿಂದ ಪ್ರಶಸ್ತಿ ನೀಡಲಾಗಿದೆ. ಶ್ರೀನಾಬ್ ಅವರು ಈಗಾಗಲೇ ಹಲವಾರು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. ಬ್ಲಾಗ್ ಗಳಲ್ಲಿ 2 ಪುಸ್ತಕಗಳನ್ನು ಹಾಗೂ 200 ಕ್ಕೂ ಹೆಚ್ಚು ಲೇಖನಗಳನ್ನು ಬರೆದಿರುತ್ತಾರೆ. ಶ್ರೀನಾಬ್ ಅವರು ಕೋಡರ್ ಆಗಿದ್ದು, ChatGPT ಮೂಲವಾಗಿರುವ OpenAI ನೊಂದಿಗೆ ಎರಡು ಕೃತಕ ಬುದ್ಧಿಮತ್ತೆ ಆಧಾರಿತ ಯೋಜನೆಗಳನ್ನು ನಿರ್ಮಿಸಿದ್ದಾರೆ.
ಶ್ರೀನಾಭ್ ಅವರು ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರದಿಂದ ಭೌತಶಾಸ್ತ್ರದಲ್ಲಿ ಎರಡು ಕೋರ್ಸ್ ಗಳನ್ನು ಮಾಡಿದ್ದಾರೆ. ಶ್ರೀನಾಭ್ ಅವರು 2021 ರಲ್ಲಿ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ 787 ನೇ ಅಖಿಲ ಭಾರತ ರ್ಯಾಂಕ್ ಪಡೆದಿದ್ದಾರೆ. ಜೊತೆಗೆ ಭಾರತದ ಪ್ರಮುಖ ವೈಜ್ಞಾನಿಕ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ನಲ್ಲಿ ಪ್ರವೇಶಾತಿ ಪಡೆದು ಪ್ರಸ್ತುತ ಅವರು ಬಿಎಸ್ (ಸಂಶೋಧನೆ) ಮುಂದುವರಿಸುತ್ತಿದ್ದಾರೆ.