ಹುಬ್ಬಳ್ಳಿ, ಜ 14 (DaijiworldNews/AA): ಹಾವೇರಿ ಜಿಲ್ಲೆ ಹಾನಗಲ್ನಲ್ಲಿ ಮಹಿಳೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಸ್ಥಳೀಯ ಪೊಲೀಸರು ಮುಚ್ಚಿ ಹಾಕುತ್ತಿದ್ದಾರೆ. ಪ್ರಕರಣದ ತನಿಖೆಗೆ ಎಸ್ ಐಟಿ ರಚನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಹಾವೇರಿಗೆ ಬಂದಾಗ ಪ್ರಕರಣವನ್ನು ಎಸ್ ಐಟಿಗೆ ವಹಿಸುವ ನಿರೀಕ್ಷೆ ಇದೆ. ಪೊಲೀಸರಿಂದ ನಾವು ಏನನ್ನೂ ನಿರೀಕ್ಷಿಸಲು ಆಗುವುದಿಲ್ಲ. ತನಿಖೆಯ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕುವ ಪೊಲೀಸರ ಪ್ರಯತ್ನ ವಿಫಲವಾಗಿದೆ. ಸಂತ್ರಸ್ತ ಮಹಿಳೆಗೆ ಹಣ ನೀಡಿ ದೂರನ್ನು ಹಿಂಪಡೆಯುವಂತೆ ತಿಳಿಸಿದ್ದರು. ಇದೀಗ ಸಂತ್ರಸ್ತ ಮಹಿಳೆ ದೂರನ್ನು ಹಿಂಪಡೆಯುವಂತೆ ಹೇಳಿರುವುದು ಬಹಿರಂಗವಾಗಿದೆ ಎಂದು ಅವರು ಹೇಳಿದರು.
ಜ. 22ರ ಬಳಿಕ ರಾಮಮಂದಿರಕ್ಕೆ ಹೋಗುತ್ತೇನೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಮಮಂದಿರ ವಿಚಾರವಾಗಿ ಸಿದ್ದರಾಮಯ್ಯ ಗೊಂದಲದಲ್ಲಿ ಇದ್ದಾರೆ. ಸಿದ್ದರಾಮಯ್ಯ ಹೆಸರಲ್ಲಿ ರಾಮ ಇದೆ. ಆದರೆ ರಾಜಕೀಯಕ್ಕಾಗಿ, ಅಧಿಕಾರಕ್ಕಾಗಿ ಅವರ ಹೆಸರಲ್ಲಿರುವ ರಾಮನನ್ನೇ ಕಡೆಗಣಿಸಿದ್ದಾರೆ. ತಡವಾದರೂ ಸಿದ್ದರಾಮಯ್ಯ ಅವರಿಗೆ ಜ್ಞಾನೋದಯವಾಗಿದೆ. ಜ. 22ರ ಬಳಿಕ ರಾಮಮಂದಿರಕ್ಕೆ ನಾನು ಹೋಗುತ್ತೇನೆ ಎನ್ನುತ್ತಾರೆ. ಮತ್ತೆ ಹೋಗಲ್ಲ ಎನ್ನುತ್ತಾರೆ. ಸಿದ್ದರಾಮಯ್ಯ ಅವರ ಆತ್ಮಸಾಕ್ಷಿ ಅಯೋಧ್ಯೆಗೆ ಹೋಗಬೇಕು ಅಂತಿದೆ. ಆದರೆ ಕಾಂಗ್ರೆಸ್ ಪಕ್ಷದ ವರಿಷ್ಠರು ಬೇಡಾ ಅಂತಾರೆ. ಆದ್ದರಿಂದ ಸಿದ್ದರಾಮಯ್ಯ ಅವರು ಗೊಂದಲದಲ್ಲಿದಾರೆ ಎಂದು ತಿಳಿಸಿದ್ದಾರೆ.