ಹರಿಯಾಣ, ಜ 15(DaijiworldNews/SK): ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಆತಂರಿಕ ತೃಪ್ತಿಗಾಗಿ ದುಡಿವುದು ಬಹಳ ಕಡಿಮೆ. ಕೈ ತುಂಬಾ ಸಂಬಳ ಬಂದರೆ ನಂತರ ಏನನ್ನು ಸಾಧಿಸುವ ಅಲೋಚನೆಯನ್ನು ಸಹ ಮಾಡುವುದಿಲ್ಲ. ಆದರೆ ಇಲ್ಲೊಬ್ಬರು ಯುಪಿಎಸ್ ಸಿ ಪರೀಕ್ಷೆ ಬರೆಯಬೇಕೆಂಬ ಕನಸಿಗೋಸ್ಕರ ಉತ್ತಮ ವೃತ್ತಿಯನ್ನು ತೊರೆದರು. ಇಷ್ಟು ಮಾತ್ರವಲ್ಲದೇ ತಮ್ಮ ಮಗುವಿನಿಂದ ಎರಡು ವರ್ಷಗಳ ಕಾಲ ದೂರ ಉಳಿದು ಯುಪಿಎಸ್ ಸಿ ಪರೀಕ್ಷೆ ಎದುರಿಸಿ ಎರಡನೇ ಯತ್ನದಲ್ಲಿ 2ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿಯಾದ ಅನುಕುಮಾರಿ ಯಶೋಗಾಥೆ.
ಪ್ರಸ್ತುತ ಕೇರಳದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮಿಷನ್ ನಿರ್ದೇಶಕರಾಗಿ ಮತ್ತು ಕೇರಳ ರಾಜ್ಯ ಐಟಿ ಮಿಷನ್ನ ನಿರ್ದೇಶಕರಾಗಿ ಹೆಚ್ಚುವರಿ ಪ್ರಭಾರರಾಗಿ ಕಾರ್ಯನಿರ್ವಹಿಸುತ್ತಿರುವ ಅನು ಕುಮಾರಿ.
ಹರಿಯಾಣದ ಸೋನಿಪತ್ ಮೂಲದವರು. ಅವರು ದೆಹಲಿ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಬಿಎಸ್ಸಿ ಪದವಿಯನ್ನು ಪಡೆದಿದ್ದಾರೆ. ನಂತರ ನಾಗ್ಪುರದ ಐಎಂಟಿಯಿಂದ ಫೈನಾನ್ಸ್ ಮತ್ತು ಮಾರ್ಕೆಟಿಂಗ್ ವಿಷಯದಲ್ಲಿ ಎಂಬಿಎ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು.
ಸ್ನಾತಕೋತ್ತರ ಪೂರ್ಣಗೊಳಿಸಿದ ನಂತರ ಅವರು ಖಾಸಗಿ ಕಂಪನಿ ಒಂದರಲ್ಲಿ ಒಂದು ವರ್ಷಗಳ ಕಾಲ ಕೆಲಸ ನಿರ್ವಹಿಸಿದರು. ಈ ಕೆಲಸದಲ್ಲಿ ಉತ್ತಮ ಸಂಭಾವನೆಯನ್ನು ಪಡೆಯುತ್ತಿದ್ದರು. ನಂತರ ಕೆಲಸ ನಿರ್ವಹಿಸುತ್ತಿದ್ದ ದಿನಗಳಲ್ಲಿ ಅವರಿಗೆ ಮದುವೆಯನ್ನು ಮಾಡಲಾಯಿತು.ಮದುವೆಯ ನಂತರ ಅವರು ಗುರ್ಗಾಂವ್ ಗೆ ವರ್ಗಾವಣೆಗೊಂಡರು ಅಲ್ಲಿಯು ಕಾರ್ಪೊರೇಟ್ ವಲಯದಲ್ಲಿ ಕೆಲಸ ಮುಂದುವರಿಸಿದರು. ಆದರೆ ಈ ಕೆಲಸದಲ್ಲಿ ಹೆಚ್ಚು ಸಂಬಳ ಸಿಗುತ್ತಿದ್ದರು ಆಂತರಿಕ ತೃಪ್ತಿ ಇರಲಿಲ್ಲ. ಈ ಕಾರಣದಿಂದಾಗಿ ತಮ್ಮ ಕನಸನ್ನು ನನಸು ಮಾಡಲು ಹೊರಟ ಅವರು ವೃತ್ತಿಯನ್ನು ತೊರೆದು UPSC ಪರೀಕ್ಷೆಗೆ ತಯಾರಿ ನಡೆಸಲು ಮುಂದಾದರು.
ಇನ್ನು ಯುಪಿಎಸ್ ಸಿಗೆ ತಯಾರಿ ನಡೆಸುತ್ತಿದ್ದ ವೇಳೆ ಅವರಿಗೆ ಒಂದು ಮಗು ಇದ್ದ ಕಾರಣ ಕುಟುಂಬದ ಸದಸ್ಯರು ಯುಪಿಎಸ್ ಸಿ ಪರೀಕ್ಷೆಯ ಆಲೋಚನೆಯನ್ನು ಕೈಬಿಡುವಂತೆ ಸಲಹೆ ನೀಡಿದ್ದರು. ಆದರೆ ಅವರಲ್ಲಿದ್ದ ಐಎಎಸ್ ಅಧಿಕಾರಿಯಗಾಬೇಕೆಂಬ ಛಲ ಯಾರ ಮಾತನ್ನು ಕೇಳಲು ಬೀಡಲಿಲ್ಲ. ನಂತರ ಅನುಕುಮಾರಿ ಯುಪಿಎಸ್ ಸಿ ಪರೀಕ್ಷೆಗೆ ಸಿದ್ದತೆ ನಡೆಸಲು ಆರಂಭಿಸಿರು.ಆದರೆ ಅವರಿಗೆ ಪರೀಕ್ಷೆಯನ್ನು ಎದುರಿಸಬೇಕಾದರೆ ಬಹುದೊಡ್ಡ ನಿರ್ಧಾರವನ್ನು ಕೈಗೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ಸಣ್ಣ ಮಗು ಇದ್ದ ಕಾರಣ ಪರೀಕ್ಷೆಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಸುಮಾರು ಎರಡು ವರ್ಷಗಳ ಕಾಲ ಅವರು ತಮ್ಮ ಮಗನಿಂದ ದೂರವಿರಲು ನಿರ್ಧರಿಸಿದರು.
ಇನ್ನು ಪರೀಕ್ಷೆಗೆ ಸಿದ್ಧತೆ ನಡೆಸಿದ ಅನುವವರಿಗೆ ತಾವು ಇದ್ದ ಪ್ರದೇಶದಲ್ಲಿ ಪತ್ರಿಕೆಗಳು ಇರಲಿಲ್ಲ. ಈ ಕಾರಣದಿಂದ ಆನ್ ಲೈನ್ ಶಿಕ್ಷಣದತ್ತ ಮುಖ ಮಾಡಿದರು. ಸಂಪೂರ್ಣ ತಯಾರಿಯ ನಂತರ ಪರೀಕ್ಷೆ ಬರೆಯಲು ಸಿದ್ದರಾದ ಅನು ಕುಮಾರಿಯವರಿಗೆ ಪ್ರಥಮ ಯತ್ನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗಲಿಲ್ಲ. ಆದರೆ ಸಾರ್ಧತ್ಮಕ ಪರೀಕ್ಷೆಯನ್ನು ಎದುರಿಸಬೇಕೆಂಬ ಅವರಲ್ಲಿದ್ದ ದೃಢ ನಿರ್ಧಾರ ತಮ್ಮ ಎರಡನೇ ಪ್ರಯತ್ನದಲ್ಲಿ, ಇಡೀ ಭಾರತದಲ್ಲಿಯೇ 2ನೇ ರ್ಯಾಂಕ್ ಪಡೆದುಕೊಂಡು 2017 ರಲ್ಲಿ ತಮ್ಮ ಐಎಎಸ್ ಅಧಿಕಾರಿಯಾಗುವ ಕನಸನ್ನು ಈಡೇರಿಸಿಕೊಂಡರು.