ಹುಬ್ಬಳ್ಳಿ,ಜ 15(DaijiworldNews/AK): ಇಂಡಿಯಾ ಕೂಟದ ಅಸ್ತಿತ್ವ ಎಲ್ಲಿದೆ, ತೋರಿಕೆಗೆ ಅಷ್ಟೇ ಇದೊಂದು ಘಟಬಂಧನ್ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ ಮಾಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ, ಉತ್ತರಪ್ರದೇಶ, ಪಶ್ಚಿಮ ಬಂಗಾಳಗದಲ್ಲಿ ಜಗಳ ಆಡುತ್ತಿದ್ದಾರೆ. ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರವಿದೆ. ಕಮ್ಯುನಿಸ್ಟ್ ಸರ್ಕಾರ ನಮ್ಮ ಮೇಲೆ ಅತ್ಯಾಚಾರ ಮಾಡುತ್ತಿದೆ, ನಮ್ಮ ಕಾರ್ಯಕರ್ತರನ್ನ ಹೊಡಿಯುತ್ತಿದ್ದಾರೆ ಅಂತ ಅಲ್ಲಿನ ಕಾರ್ಯಕರ್ತರು ಹೇಳುತ್ತಿದ್ದಾರೆ. ನಿಮ್ಮಲ್ಲೇ ಹೊಂದಾಣಿಕೆ ಇಲ್ಲ. ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಕ್ಕೂಟದಿಂದ ಹೊರ ಬರುವ ವಿಚಾರ ಮಾಡುತ್ತಿದ್ದಾರೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಸೋತರೇ ಗಾಂಧಿ ಕುಟುಂಬದ ಮೇಲೆ ಬರಬಾರದು, ಬಲಿಪಶು ಮಾಡಲೆಂದೇ ಮಲ್ಲಿಕಾರ್ಜುನ ಖರ್ಗೆ ಅವರನ್ನು ಘಮಂಡಿ ಘಟಬಂಧನ್ ನಾಯಕನನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.
ಒಟ್ಟಿನಲ್ಲಿ ಅವರಲ್ಲೇ ಹೊಂದಾಣಿಕೆ ಇಲ್ಲ. ಕಾಂಗ್ರೆಸ್ನವರು ಅಸಹಾಯಕ ಸ್ಥಿತಿಗೆ ಬಂದಿದ್ದಾರೆ. ಅವರು ಸೋಲುವುದು ಗ್ಯಾರೆಂಟಿ, ಜಗ್ಗೇಶ್ ಬಾಷೆಯಲ್ಲಿ ಹೇಳೋದಾದರೆ ಢಮಾರ್ ಆಗೋದು ಗ್ಯಾರೆಂಟಿ. ಅದಕ್ಕೆ ಮಲ್ಲಿಕಾರ್ಜುನ್ ಖರ್ಗೆಯವರನ್ನು ಬಲಿ ಕೊಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ರಾಮಮಂದಿರ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ, ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ. ಯಾರು ರಾಜಕಾರಣ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಎಲ್ಲರಿಗೂ ಆಹ್ವಾನ ಇತ್ತು, ಸಹಜವಾಗಿ ಬಂದಿದ್ದರೇ ಚರ್ಚೆ ಆಗುತ್ತಿರಲಿಲ್ಲ. ಎಲ್ಲಿ ವೋಟ್ ಸಿಗುತ್ತೆ ಅಲ್ಲಿಗೆ ಹೋಗುವ ವಿಚಾರ ಕಾಂಗ್ರೆಸ್ನದ್ದು ಎಂದು ವಾಗ್ದಾಳಿ ಮಾಡಿದರು.