ಪಂಜಾಬ್, ಜ 16 (DaijiworldNews/MS): ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್ರನ್ನು ಗಣರಾಜ್ಯೋತ್ಸವದ ದಿನದಂದು ಹತ್ಯೆ ಮಾಡುವುದಾಗಿ ಉಗ್ರ, ಸಿಖ್ಸ್ ಫಾರ್ ಜಸ್ಟಿಸ್ (SFJ) ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್ ಬೆದರಿಕೆ ಹಾಕಿದ್ದಾನೆ. ಗ್ಯಾಂಗ್ಸ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಡಿಜಿಪಿ ಗೌರವ್ ಯಾದವ್ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ.
ಜನವರಿ 22 ರಂದು ಅಯೋಧ್ಯೆ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪನ್ನುನ್ ಭಾರತ ಸರ್ಕಾರಕ್ಕೆ ಬೆದರಿಕೆ ಹಾಕಿದ ಒಂದು ವಾರದ ನಂತರ ಈ ಬೆಳವಣಿಗೆ ನಡೆದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡಿಜಿಪಿ ಯಾದವ್, ಪಂಜಾಬ್ ಪೊಲೀಸ್ ಪಡೆ ದರೋಡೆಕೋರರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಪನ್ನುನ್ ಈ ಹಿಂದೆ ಭಾರತೀಯ ಅಧಿಕಾರಿಗಳ, ರಾಜಕಾರಣಿಗಳ ವಿರುದ್ಧ ಅನೇಕ ಬಾರಿ ಬೆದರಿಕೆಗಳನ್ನು ಹಾಕಿದ್ದಾರೆ.