ಬೆಂಗಳೂರು, ಜ 16 (DaijiworldNews/MS): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿ ಅತ್ಯಾಚಾರ ಪ್ರಕರಣದ ತನಿಖೆ ನಡೆಸಲು ಎಸ್ ಐಟಿ ರಚಿಸಲು ನಿರಾಕರಣೆ ಮಾಡಿರುವುದು ಒಂದು ರೀತಿಯಲ್ಲಿ ಈಗಾಗಲೇ ಕೇಸ್ ತಿರುಚುವ ಮುಖಾಂತರ ಸ್ಥಳಿಯ ಪೊಲೀಸರು ಪ್ರಕರಣ ಮುಚ್ಚಿಹಾಕುವುದು ಗ್ಯಾರೆಂಟಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹಾವೇರಿ ಗ್ಯಾಂಗ್ ರೇಪ್ ಪ್ರಕರಣ ತಿರುಚಿ ಮುಚ್ಚಿಹಾಕಲು ಹಾವೇರಿ ಪೊಲೀಸರು ಪ್ರಯತ್ನ ಮಾಡುವುದಕ್ಕೆ ಲೈಸೆನ್ಸ್ ಕೊಟ್ಟಂತಾಗಿದೆ. ಮುಖ್ಯಮಂತ್ರಿಗಳ ಈ ನಿಲುವನ್ನು ಖಂಡಿಸುತ್ತೇನೆ.
ಅವರಿಗೆ ಸಂತ್ರಸ್ತ ಮಹಿಳೆಗೆ ನ್ಯಾಯಕೊಡಿಸುವ ಉದ್ದೇಶ ಇದ್ದರೆ ಕೂಡಲೆ ಎಸ್ ಐಟಿ ರಚನೆ ಮಾಡಬೇಕೆಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಹಾವೇರಿ ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ಥೆಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ಇಲ್ಲದೆ ಮನೆಗೆ ಕಳಿಸಿರುವುದಕ್ಕೆ ಸಿಎಂ ಬಳಿ ಉತ್ತರ ಇಲ್ಲ. ಹಾಗೂ ಅವಳಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಕಾಂಗ್ರೆಸ್ ಪಕ್ಷದ ಶಾಸಕರಿಗೆ ಹೇಳಿರುವುದು. ಸರ್ಕಾರ ಇಷ್ಟು ದೊಡ್ಡ ಆರೋಗ್ಯ ಇಲಾಖೆ ಇದ್ದು, ಅವಳಿಗೆ ಸೂಕ್ತ ಚಿಕಿತ್ಸೆ ಕೊಡಲು ತಯಾರಿಲ್ಲ ಎಂದರೆ, ಮತ್ತು ಆ ಜವಾಬ್ದಾರಿಯನ್ನು ತಮ್ಮ ಶಾಸಕರಿಗೆ ವಹಿಸಿರುವಂಥದ್ದು ಈ ಪ್ರಕರಣವನ್ನು ಮುಚ್ಚಿ ಹಾಕುವುದು ಗ್ಯಾರೆಂಟಿ ಹಾಗೂ ಆ ಹೆಣ್ಣು ಮಗಳನ್ನು ಸಂಪೂರ್ಣ ಹತೋಟಿಗೆ ತೆಗೆದುಕೊಳ್ಳುವ ತಂತ್ರ ಗೊತ್ತಾಗುತ್ತದೆ. ಆದ್ದರಿಂದ ಅವಳಿಗೆ ಚಿಕಿತ್ಸೆಯನ್ನು ಸಂಪೂರ್ಣ ಸರ್ಕಾರಿ ವ್ಯವಸ್ಥೆಯಲ್ಲಿಯೇ ನೀಡಬೇಕು ಎಂದು ಆಗ್ರಹಿಸಿದ್ದಾರೆ.