ಚಿಕ್ಕಬಳ್ಳಾಪುರ, ಜ 16(DaijiworldNews/PC): ಇವರಿಗೆ ಸ್ವಾಭಿಮಾನ ಇಲ್ವಾ, ನಾನು ಆಗಿದ್ದರೆ 1 ನಿಮಿಷದಲ್ಲಿ ರಾಜೀನಾಮೆ ಕೊಡುತ್ತಿದ್ದೆ ಎಂದು ಮಾಜಿ ಸಚಿವ ಸುಧಾಕರ್ ಅವರು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ಬಾಗೇಪಲ್ಲಿಯಲ್ಲಿ ಮಾತನಾಡಿದ ಅವರು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರದ್ದು ಮಾಡಿ ಕೋಲಾರಕ್ಕೆ ಮರಳಿ ಸೇರಿಸಿದ್ದೀರಿ. ನಮ್ಮ ಜಿಲ್ಲೆಯ ಹೈನುಗಾರರು ಏನು ಮಾಡಿದ್ದಾರೆ. ಜಿಲ್ಲೆಯ ಜನ ಕಾಂಗ್ರೆಸ್ ಎಂಎಲ್ ಎ ಗಳನ್ನು ಗೆಲ್ಲಿಸಿದ್ದಾರೆ ಆದರೆ ಇವರು ಏನು ಮಾಡುತ್ತಿದ್ದಾರೆ. ಇವರಿಗೆ ಸ್ವಾಭಿಮಾನ ಇಲ್ವಾ ನನ್ನಂತಹವನು ಆಗಿದ್ದರೆ 1 ನಿಮಿಷದಲ್ಲಿ ರಾಜೀನಾಮೆ ಕೊಡುತ್ತಿದ್ದೆ ಎಂದು ಕಿಡಿಕಾರಿದರು.
ನಾನು ಅಧಿಕಾರಕ್ಕಾಗಿ ಅಂಟಿಕೊಂಡಿರಲಿಲ್ಲ ಬದಲಿಗೆ ರೈತರ ಪರ ನಿಂತಿದ್ದೀನಿ ಅಂತ ಟಾಂಗ್ ನೀಡಿದರು. ಎಚ್ ಎನ್ ಕೆಸಿ ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಿ ಅಂತ ಆಗ್ರಹಿಸಿದೆ. ನೇರವಾಗಿ ಬಳಸಿದ್ರೆ ಆ ನೀರು ಮಾರಕ, ತಕ್ಷಣ ನೀವು ಹಾಲು ಒಕ್ಕೂಟ ಮರುಸ್ಥಾಪನೆ ಮಾಡಬೇಕು. ಮೂರನೇ ಹಂತದ ಶುದ್ಧೀಕರಣ ಆಗಬೇಕು. ಇವರು ನಾನು ಇದ್ದಾಗ ಆದ ಕಟ್ಟಡ ಅಷ್ಟೇ ಇದೆ, ಮೆಡಿಕಲ್ ಕಾಲೇಜು ಗೋಪುರ ಕೂಡ ಕಂಪ್ಲೀಟ್ ಮಾಡಿಲ್ಲ, ಆಸ್ಪತ್ರೆ ಮಾಡಲು ಯೋಗ್ಯತೆ ಇಲ್ಲ. ವಿವಿಧ ರೀತಿಯ ಕಾರ್ಯಕ್ರಮ ಮಾಡುತ್ತಾರೆ. ನಾಚಿಕೆ ಅಗಲ್ವಾ, ನಿಮ್ಮ ಕೊಡುಗೆಯೇನು ಎಂದು ವಾಗ್ದಾಳಿ ನಡೆಸಿದರು.