ಬೆಂಗಳೂರು, ಜ 19(DaijiworldNews/AA): ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ಹಗುರವಾಗಿ ಮಾತನಾಡಿದ್ದಾರೆಂದು ಆರೋಪಿಸಿರುವ ರಾಜ್ಯ ಕಾಂಗ್ರೆಸ್, ಅವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್, "ಚಕ್ರವರ್ತಿ ಸೂಲಿಬೆಲೆ, ಖರ್ಗೆ ಅವರ ಕುರಿತು ಹಗುರವಾಗಿ ಮಾತನಾಡಿರುವುದು ಖಂಡನೀಯ. ಬಾಡಿಗೆ ಭಾಷಣ ಮಾಡಿಕೊಂಡು ಬದುಕುವ ಪರಾವಲಂಬಿ ಜೀವಿಗಳಿಗೆ ಶೋಷಿತ ಸಮುದಾಯದ ನಾಯಕರೊಬ್ಬರು ಅತ್ಯುನ್ನತ ಸ್ಥಾನಕ್ಕೆ ಏರುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ" ಎಂದು ಟ್ವೀಟ್ ಮಾಡಿದೆ.
ಜೊತೆಗೆ "ಸುಳ್ಳುಗಳನ್ನು ಹಬ್ಬಿಸುತ್ತ, ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಇಂತಹ ಕ್ರಿಮಿಗಳನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಬೇಕೆಂದು" ಗೃಹಸಚಿವ ಪರಮೇಶ್ವರ್ ಅವರಲ್ಲಿ ಮನವಿ ಮಾಡುತ್ತೇವೆ ಎಂದು ಕಾಂಗ್ರೆಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಚಕ್ರವರ್ತಿ ಸೂಲಿಬೆಲೆ ಅವರು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಕಲುಬುರುಗಿಯ ಇಎಸ್ ಐ ಆಸ್ಪತ್ರೆ ವಿಚಾರವಾಗಿ ಖರ್ಗೆ ಅವರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಇಎಸ್ ಐ ಆಸ್ಪತ್ರೆಯ ಡ್ರೋನ್ ದೃಶ್ಯ ನೋಡಿದರೆ ಖರ್ಗೆ ಹೆಸರು ಕಾಣಿಸುತ್ತದೆ. ಆಸ್ಪತ್ರೆ ಮೇಲ್ಭಾಗದಿಂದ ನೋಡಿದರೆ ಅವರ ಹೆಸರು ಕಾಣಿಸುತ್ತದೆ. ಸರ್ಕಾರಿ ಕಟ್ಟಡದ ಮೇಲೆ ಖರ್ಗೆ ಹೆಸರು ಯಾಕೆ? ತಮ್ಮ ಹೆಸರು ಶಾಶ್ವತಗೊಳಿಸುವಂತ ಅಯೋಗ್ಯರಿದ್ದಾರೆ ಎಂದು ಕಿಡಿಕಾರಿದ್ದರು. 'ಏಯ್ ಪುಣ್ಯಾತ್ಮ ಯಾರಪ್ಪನ ದುಡ್ಡು ಎಂದು ಮಾಡಿದ್ಯಪ್ಪ? ನಾಚಿಕೆಯಾಗಲ್ವ?' ಎಂದು ಖರ್ಗೆ ಅವರನ್ನು ಏಕವಚದಲ್ಲಿ ಸಂಬೋಧಿಸಿದ್ದರು.