ನವದೆಹಲಿ,ಜ 20(DaijiworldNews/RA):ಅಯೋಧ್ಯೆಯಲ್ಲಿನ ರಾಮಮಂದಿರ ಉದ್ಘಾಟನೆಗೆ ಬಹುತೇಕ ವಿರೋಧ ಪಕ್ಷಗಳು ಹಾಜರಾಗದಿರುವ ನಿರ್ಧಾರವನ್ನು ತಳೆದಿವೆ. ಇವುಗಳಲ್ಲಿ ಎಎಪಿ ಕೂಡ ಒಂದು.
ಆದರೆ ಇವೆಲ್ಲರ ಮಧ್ಯೆ ಟೀಮ್ ಇಂಡಿಯಾದ ಮಾಜಿ ಸ್ಪೀನ್ ಮಾಂತ್ರಿಕ ,ಆಮ್ ಆದ್ಮಿ ಪಕ್ಷದ ನಾಯಕ, ರಾಜ್ಯ ಸಭಾ ಸದಸ್ಯ ಹರ್ಭಜನ್ ಸಿಂಗ್ ಉದ್ಘಾಟನೆಗೆ ಹಾಜರಾಗುವುದಾಗಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ಯಾರೇನೇ ಮಾಡಲಿ ನಾನಂತೂ ಜನವರಿ 22ರ ಸೋಮವಾರದಂದು ನಡೆಯಲಿರುವ ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗಿಯಾಗುತ್ತೇನೆ.
ಯಾರು ಸಮಾರಂಭಕ್ಕೆ ಹೋಗುವುದು ಅಥವಾ ಹೋಗದಿರುವುದು ಮುಖ್ಯವಲ್ಲ.ಕಾಂಗ್ರೆಸ್ ಹೋಗಲಿ ಅಥವಾ ಹೋಗದಿರಲಿ ನಾನಂತೂ ಖಂಡಿತವಾಗಿಯೂ ಹೋಗುತ್ತೇನೆ. ಈ ಸಮಯದಲ್ಲಿ ರಾಮಮಂದಿರವನ್ನು ನಿರ್ಮಾಣ ಮಾಡುತ್ತಿರುವುದು ನಮ್ಮ ಅದೃಷ್ಟ.
ಆದ್ದರಿಂದ ನಾವೆಲ್ಲರೂ ಹೋಗಿ ರಾಮನ ಆಶೀರ್ವಾದವನ್ನು ಪಡೆಯಬೇಕು.
ನಾನು ಖಂಡಿತವಾಗಿಯೂ ಆಶೀರ್ವಾದವನ್ನು ಪಡೆಯಲು ಹೋಗುತಿದ್ದೇನೆ ಎಂದು ಅವರು ಹೇಳಿದ್ದಾರೆ.
ಇತ್ತ ಬಿಜೆಪಿಯು ಈ ಕಾರ್ಯಕ್ರಮವನ್ನು ರಾಜಕೀಯಗೊಳಿಸುತ್ತಿದೆ ಮತ್ತು 2024ರ ಲೋಕಸಭೆ ಚುನಾವಣೆಗೆ ಪ್ರಚಾರದ ಅಸ್ತ್ರವಾಗಿ ದೇವಾಲಯದ ಉದ್ಘಾಟನೆಯನ್ನು ಬಳಸುತ್ತಿದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿವೆ.