ಉತ್ತರಪ್ರದೇಶ, ಜ 22 (DaijiworldNews/SK): ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಂಪನ್ನಗೊಂಡಿದೆ. ಈ ಐತಿಹಾಸಿಕ ಕ್ಷಣದಲ್ಲಿ ಭಾಗಿಯಾದ ಗಣ್ಯರು, ಅತಿಥಿಗಳಿಗೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಹಲವು ಉಡುಗೊರೆಗಳನ್ನು ನೀಡಲಾಗಿದೆ.
ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ 7,000 ಮಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡಿತ್ತು. ಈ ಕಾರ್ಯಕ್ರಮದಲ್ಲಿ ದೇಶ ವಿದೇಶದ ಪ್ರಮುಖ ವ್ಯಕ್ತಿಗಳು ಭಾಗವಹಿಸಿ, ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ನೆರೆವೇರಿದ ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣಪ್ರತಿಷ್ಠಾಪನೆಗೆ ಸಾಕ್ಷಿಯಾದರು.
ಅಥಿತಿಗಳಿಗೆ ಉಡುಗೊರೆಯನ್ನು ನೀಡಲು ವಿನ್ಯಾಸಗೊಳಿಸಿದ ಬ್ಯಾಗ್ ನಲ್ಲಿ ಮಂದಿರ ಹಾಗೂ ಭಗವಾನ್ ರಾಮಲಲ್ಲಾನ ಗ್ರಾಫಿಕ್ ಚಿತ್ರವಿದೆ. ಈ ಬ್ಯಾಗ್ ನ ಒಳಗಡೆ ಲೋಹದ ಹಣತೆ, ಅಯೋಧ್ಯೆಯ ಕುರಿತಾದ ಪುಸ್ತಕ, ವಿಶೇಷ ಮಾಲೆ, ಭಗವಾನ್ ರಾಮನ ಹೆಸರು ಇರುವ ಸ್ಕಾರ್ಫ್ ಗಳು ಇದೆ.
ಇನ್ನು ಉಡುಗೊರೆ ನೀಡಲಾದ ಪುಸ್ತಕದಲ್ಲಿ ಅಯೋಧ್ಯ ಧಾಮ- ಭಗವಂತನ ಸನ್ನಿಧಿ ಎಂಬ ಶೀರ್ಷಿಕೆ ಇದ್ದು, ಪುಸ್ತಕದಲ್ಲಿ ಭಗವಾನ್ ರಾಮಲಲ್ಲಾನ ಹಳೆಯ ವಿಗ್ರಹದ ಫೋಟೋಗಳು ಹಾಗೂ ತುಳಸಿ ಮಾಲೆಯಲ್ಲಿ ಉತ್ತರ ಪ್ರದೇಶ ಪ್ರವಾಸೋದ್ಯಮ ಎಂಬ ಟ್ಯಾಗ್ ಲೈನ್ ಇದೆ. ಇದರೊಂದಿಗೆ ಅತಿಥಿಗಳಿಗೆ ಲಡ್ಡು, ಗೋಡಂಬಿ ಹಾಗೂ ಇನ್ನಿತರ ಪ್ರಸಾದ ನೀಡಿ ಗೌರವಿಸಲಾಯಿತು.