ಉತ್ತರಪ್ರದೇಶ, ಜ 22 (DaijiworldNews/SK): ಅಯೋಧ್ಯೆಯ ರಾಮಮಂದಿರದ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಸಂದರ್ಭದಲ್ಲಿ ಭಾಗಿಯಾಗಿದ್ದ ವೇಳೆ ಭಕ್ತರೊರ್ವರಿಗೆ ಹೃದಯಾಘಾತ ಸಂಭವಿಸದ ಘಟನೆ ಅಯೋದ್ಯೆಯಲ್ಲಿ ಸೋಮವಾರ ನಡೆದಿದೆ.
ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಯನ್ನು ರಾಮಕೃಷ್ಣ ಶ್ರೀವಾಸ್ತವ (65) ಎಂದು ಗುರುತಿಸಲಾಗಿದೆ.
ರಾಮಕೃಷ್ಣ ಅವರಿಗೆ ಹೃದಯಾಘಾತ ಸಂಭವಿಸಿದ ವೇಳೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಭಾರತೀಯ ವಾಯುಪಡೆಯಾದ ವಿಂಗ್ ಕಮಾಂಡರ್ ಮನೀಶ್ ಗುಪ್ತಾ ನೇತೃತ್ವದ ಭೀಷ್ಮ್ ಕ್ಯೂಬ್ ತಂಡ ಕೆಲವೇ ನಿಮಿಷದಲ್ಲಿ ಸಂಚಾರಿ ಆಸ್ಪತ್ರೆಗೆ ಸ್ಥಳಾಂತರಿಸಿತು. ಗೋಲ್ಡನ್ ಅವರ್ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ವ್ಯಕ್ತಿಯನ್ನು ರಕ್ಷಿಸಲಾಯಿತು.
ಮೂಲಗಳ ಪ್ರಕಾರ ಹೃದಯಾಘಾತಕ್ಕೆ ಒಳಗಾಗುವ ಸಂದರ್ಭದಲ್ಲಿ ವ್ಯಕ್ತಿಯ ರಕ್ತದೊತ್ತಡವು 210/170 ಮಟ್ಟಕ್ಕೆ ಹೆಚ್ಚಿತ್ತು. ಆದ್ದರಿಂದ ಭೀಷ್ಮ್ ತಂಡವು ಮೊದಲು ಹೃದಯಾಘಾತಕ್ಕೆ ಒಳಗಾದವರಿಗೆ ಪ್ರಥಮ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿತ್ತು.
ಬಳಿಕ ಆರೋಗ್ಯ ಸಹಜ ಸ್ಥಿತಿಗೆ ಮರಳಿದ ನಂತರ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ತಿಳಿದು ಬಂದಿದೆ.
ಅಯೋಧ್ಯೆಗೆ ಪ್ರಾಣಪ್ರತಿಷ್ಠೆ ಸಮಾರಂಭದ ಹಿನ್ನೆಲೆ ಹೆಚ್ಚಿನ ಗಣ್ಯರು ಆಗಮಿಸುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕ್ರಮವಾಗಿ ಆರೋಗ್ಯ ಮೈತ್ರಿ ಹಾಗೂ ವಿಪತ್ತು ನಿರ್ವಹಣಾ ಯೋಜನೆಯಡಿಯಲ್ಲಿ ಕ್ಯೂಬ್-ಭೀಷ್ಮ್ ಮೊಬೈಲ್ ಆಸ್ಪತ್ರೆಗಳನ್ನು ತೆರೆಯಲಾಗಿತ್ತು.