ನವದೆಹಲಿ, ಜ 22 (DaijiworldNews/SK): ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮ ಪ್ರತಿಷ್ಠಾಪನೆಯಾಗಿರುವ ಬೆನ್ನಲ್ಲೇ, ಇದೀಗ ಅಯೋಧ್ಯೆ ನಗರದಿಂದ 25 ಕಿ. ಮೀ. ದೂರದಲ್ಲಿ ಇರುವ ಧನ್ನಿಪುರದಲ್ಲಿ ಮಸೀದಿ ನಿರ್ಮಾಣಕ್ಕೆ ರೂಪುರೇಷೆ ಸಿದ್ದವಾಗಿದೆ.
ಮಸೀದಿ ನಿರ್ಮಾಣದ ಬಗ್ಗೆ ಮಾಹಿತಿ ನೀಡಿರುವ ಮಸೀದಿ ನಿರ್ಮಾಣ ಮೇಲುಸ್ತುವಾರಿ ವಹಿಸಿಕೊಂಡಿರುವ ಇಂಡೊ–ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್ನ (ಐಐಸಿಎಫ್) ಅಭಿವೃದ್ಧಿ ಸಮಿತಿಯ ಮುಖ್ಯಸ್ಥ ಹಾಜಿ ಅರ್ಫಾತ್ ಶೇಖ್ ಅವರು, ಪವಿತ್ರ ರಮ್ಜಾನ್ ತಿಂಗಳು ಮುಕ್ತಾಯವಾದ ನಂತರ ಮೇ ತಿಂಗಳಿನಲ್ಲಿ ಮಸೀದಿ ನಿರ್ಮಾಣ ಕಾಮಗಾರಿ ಆರಂಭಿಸಲಾಗುತ್ತದೆ. ಮಸೀದಿಯ ಕಾಮಗಾರಿ ೩-೪ ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಕ್ರೌಡ್ ಫಂಡ್ ಸಂಗ್ರಹಕ್ಕಾಗಿ ಮುಂದಿನ ವಾರಗಳಲ್ಲಿ ವೆಬ್ಸೈಟ್ ಆರಂಭಿಸಲಾಗುವುದು ಎಂದು ಶೇಖ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿದ ಐಐಸಿಎಫ್ ಅಧ್ಯಕ್ಷ ಜುಫರ್ ಅಹ್ಮದ್ ಫಾರೂಕಿ ಅವರು, ಮಸೀದಿ ನಿರ್ಮಾಣದ ನಿಟ್ಟಿನಲ್ಲಿ ನಾವು ದೇಣಿಗೆ ಸಂಗ್ರಹಕ್ಕೆ ಸಾರ್ವಜನಿಕ ಚಳವಳಿ ನಡೆಸಿಲ್ಲ. ಜೊತೆಗೆ ಈ ಕುರಿತು ಯಾರ ಬಳಿಯೂ ಕೇಳಿಕೊಂಡಿಲ್ಲ. ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ ಹಿಂದೂ ಸಂಘಟನೆಗಳು ಮೂರು ದಶಕಗಳ ಹಿಂದಿನಿಂದಲೂ ದೇಣಿಗೆ ಸಂಗ್ರಹವನ್ನು ಆರಂಭಿಸಿದ್ದವು. ಈ ಮೂಲಕ ಭಾರತದ 4 ಕೋಟಿ ಜನರಿಂದ 30 ಬಿಲಿಯನ್ ಸಂಗ್ರಹಿಸಿದೆ.
ಇನ್ನು ಮಸೀದಿ ನಿರ್ಮಾಣದಲ್ಲಿ ಮಿನಾರ್ ಸೇರಿದಂತೆ ಹಲವು ಸಾಂಪ್ರದಾಯಿಕ ಅಂಶಗಳನ್ನು ಸೇರಿಸಲಿದೆ. ಅಲ್ಲದೇ ಮಸೀದಿ ಆವರಣದಲ್ಲಿ 500 ಹಾಸಿಗೆ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನೂ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಮಸೀದಿ ಯೋಜನೆ ವಿಳಂಬವಾಗಿದೆ ಎಂದು ಐಐಸಿಎಫ್ ಕಾರ್ಯದರ್ಶಿ ಅತಹಾರ್ ಹುಸೇನ್ ತಿಳಿಸಿದರು.