ಅಯೋಧ್ಯೆ,ಜ 23(DaijiworldNews/RA): ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ವಿರಾಜಮಾನನಾಗಿರುವ ಬಾಲರಾಮನಿಗೆ ಭಾರತದ ಮಾತ್ರವಲ್ಲದೇ ವಿದೇಶಗಳಿಂದಲೂ ರಾಮಮಂದಿರಕ್ಕೆ ಉಡುಗೊರೆಗಳು ಹರಿದು ಬರುತ್ತಿದೆ.
ಗುಜರಾತ್ ಮೂಲದ ವಜ್ರದ ವ್ಯಾಪಾರಿ ಮುಕೇಶ್ ಪಟೇಲ್ ಎಂಬುವರು ರಾಮಲಲ್ಲಾನಿಗೆ ಸುಮಾರು 11 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇವರು ಸೂರತ್ನಲ್ಲಿ ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿಯ ಮಾಲೀಕರಾಗಿದ್ದಾರೆ.
ಇದೀಗ ಇವರ ಕುಟುಂಬಸ್ಥರು 11ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಕೊಡುಗೆಯಾಗಿ ಕೊಟ್ಟು ರಾಮನ ಮೇಲಿನ ಭಕ್ತಿ ಮೆರೆದಿದ್ದಾರೆ.ಈ ಕುರಿತು ಮುಕೇಶ್ ಪಟೇಲ್ ಮಾಧ್ಯಮಗಳೊಂದಿಗೆ ಸಂತಸ ಹಂಚಿಕೊಂಡಿದ್ದು ನಮ್ಮ ಇಡೀ ಕುಟುಂಬವು ರಾಮನ ಮೇಲೆ ಅಪಾರ ಭಕ್ತಿಯನ್ನು ಹೊಂದಿದೆ.ನಮ್ಮ ಪೂರ್ವಜರು ಕೂಡ ಅಯೋಧ್ಯೆಯಲ್ಲೊಂದು ರಾಮಮಂದಿರ ನಿರ್ಮಾಣವಾಗಬೇಕು ಎಂಬ ಕನಸು ಕಂಡಿದ್ದರು.
ರಾಮಮಂದಿರದ ಕನಸು ಈಗ ನನಸಾಗಿದೆ.ಇದರಿಂದ ನಮ್ಮ ಕುಟುಂಬವು ಸಂತಸದ ಕಡಲಲ್ಲಿ ಮುಳುಗಿಸಿದೆ. ಭಗವಾನ್ ಶ್ರೀರಾಮನು ನಮಗೆ ಸಾಕಷ್ಟು ಕೊಟ್ಟಿದ್ದಾನೆ. ಈಗ ನಾವು ರಾಮಲಲ್ಲಾನಿಗೆ ಕಿರೀಟ ನೀಡುವ ಮೂಲಕ ಸಣ್ಣ ಕೊಡುಗೆ ಕೊಟ್ಟಿದ್ದೇವೆ. ರಾಮನ ದರ್ಶನ ಪಡೆದಿರುವುದು ಕೂಡ ನಮ್ಮ ಸೌಭಾಗ್ಯ” ಎಂದಿದ್ದಾರೆ.
ಇನ್ನು ಈ ಕಿರೀಟವನ್ನು ಚಿನ್ನ,ಮುತ್ತುಗಳು ಹಾಗೂ ವಜ್ರಗಳಿಂದ ಉತ್ತರ ಭಾರತ ಶೈಲಿಯಲ್ಲಿ ಕಿರೀಟವನ್ನು ತಯಾರಿಸಲಾಗಿದೆ. ಮುಕೇಶ್ ಪಟೇಲ್ ಅವರ ಕಂಪನಿಯ ಇಬ್ಬರು ಉದ್ಯೋಗಿಗಳು ಅಯೋಧ್ಯೆಗೆ ಬಂದು ರಾಮಲಲ್ಲಾ ಮೂರ್ತಿಯ ಅಳತೆಯನ್ನು ತೆಗೆದುಕೊಂಡು ಹೋಗಿದ್ದಾರೆ. ಇದಾದ ಬಳಿಕ ಕಿರೀಟವನ್ನು ತಯಾರಿಸಿ ರಾಮನಿಗೆ ಅರ್ಪಿಸಲಾಗಿದೆ ಎಂದು ತಿಳಿದು ಬಂದಿದೆ.