ತುಮಕೂರು, ಫೆ 3(DaijiworldNews/SK): ಪೊಲೀಸ್ ಅಧಿಕಾರಿಗಳು ಒಂದು ಕಡೆ ಒಂದು ವರ್ಷ ಕೆಲಸ ನಿರ್ವಹಿಸಿದರೆ ವರ್ಗಾವಣೆ ಮಾಡಲು ಅವಕಾಶವಿದೆ. ಈ ನಿಯಮವನ್ನು ಸಡಿಲಿಸಿ ಕನಿಷ್ಠ ಎರಡು ವರ್ಷ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.
ಸರ್ಕಾರಿ ನೌಕರರು, ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ಪೊಲೀಸರ ಕರ್ತವ್ಯದಲ್ಲಿ ಚುರುಕು ತರಲು ವರ್ಗಾವಣೆಯೊಂದೇ ಸೂಕ್ತ ಮಾರ್ಗವಲ್ಲ. ಇಂತಹ ವರ್ಗಾವಣೆ ಮೇಲೆ ನನಗೆ ನಂಬಿಕೆ ಇಲ್ಲ. ಒಂದೇ ಸ್ಥಳದಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ಕೆಲಸ ಮಾಡಲು ಅವಕಾಶ ನೀಡಿದರೆ ಜನಸಾಮಾನ್ಯರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ.
ಇನ್ನು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತದೆ. ನೌಕರರಿಗೆ ವರ್ಗಾವಣೆ ಹೆಸರಿನಲ್ಲಿ ತೊಂದರೆ ಕೊಡುವುದಿಲ್ಲ ಎಂದರು.
ಆದರೆ ಅಧಿಕಾರಿಗಳು ಯಾರಿಗೂ ಅನ್ಯಾಯ ಮಾಡದೆ, ಮೇಲು–ಕೀಳು, ಬೇಧ–ಭಾವ ಮಾಡದೆ ಕೆಲಸ ನಿರ್ವಹಿಸಬೇಕು. ಸಾಮಾನ್ಯ ಜನರಿಗೂ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.