ಬೆಂಗಳೂರು,ಫೆ 3(DaijiworldNews/AK):ಗ್ಯಾರಂಟಿಯ ಮೂಲಕ ಗೆಲುವಿನ ಭ್ರಮೆಯಲ್ಲಿ ತೇಲುತ್ತಿದ್ದ ಕಾಂಗ್ರೆಸ್ ಪಕ್ಷವು ಮರ್ಮಾಘಾತಕ್ಕೆ ಒಳಗಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.
ಬಿಜೆಪಿ ಬೆಂಗಳೂರು ದಕ್ಷಿಣ ನೂತನ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಅವರ ಪದಗ್ರಹಣ ಕಾರ್ಯಕ್ರಮವು ಇಂದು ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ (ಶಾಲಿನಿ ಗ್ರೌಂಡ್ಸ್) ನೆರವೇರಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಲೋಕಸಭಾ ಚುನಾವಣೆಯ ಕುರಿತು ಚರ್ಚೆ ನಡೆಯುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಸಹಜವಾಗಿ ಇಡೀ ದೇಶದಲ್ಲಿ ಉತ್ಸಾಹ ಇತ್ತು. ಕರ್ನಾಟಕದ ವಿಜಯಪತಾಕೆಯನ್ನು ರಾಷ್ಟ್ರದ ತುಂಬ ತೆಗೆದುಕೊಂಡು ಹೋಗುವ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷದವರು ಇದ್ದರು. ಆದರೆ, ಪಂಚರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡಗಳ ಫಲಿತಾಂಶ ಬಂದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಮರ್ಮಾಘಾತ ಉಂಟಾಗಿದೆ ಎಂದು ನುಡಿದರು.
3 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಒಂದು ಭಾಗ, ಹಾಗೆಯೇ ಅಲ್ಲಿರುವ ಮತದಾರರು ಸ್ಪಷ್ಟ ಸಂದೇಶವನ್ನು ದೇಶಕ್ಕೇ ನೀಡಿದ್ದಾರೆ. ಈ ದೇಶದ ಭವಿಷ್ಯದ ದೃಷ್ಟಿಯಿಂದ ಭಾರತವನ್ನು ಒಂದು ಸಮೃದ್ಧಶಾಲಿ, ಶಕ್ತಿಶಾಲಿ ರಾಷ್ಟ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ, ಈ ದೇಶವನ್ನು ಜಗತ್ತಿನ ಅಗ್ರಗಣ್ಯ ದೇಶದ ಸಾಲಿನಲ್ಲಿ ಒಯ್ಯುವ ಶಕ್ತಿ, ಆ ಎದೆಗಾರಿಕೆ ಇರುವುದು ಪ್ರಧಾನಿ ಮೋದಿಜೀ ಅವರಿಗೆ ಮಾತ್ರ. ಹಾಗಾಗಿ ದೇಶದ ಉಜ್ವಲ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಬೂಟಾಟಿಕೆ ಗ್ಯಾರಂಟಿಗಿಂತ ನರೇಂದ್ರ ಮೋದಿಜೀ ಅವರ ಗ್ಯಾರಂಟಿಯೇ ಶ್ರೇಷ್ಠ ಎಂಬ ಸಂದೇಶವನ್ನು ಆ 3 ರಾಜ್ಯಗಳ ಮತದಾರರು ನೀಡಿದ್ದಾರೆ ಎಂದು ತಿಳಿಸಿದರು.
ಖರ್ಗೆಯವರ ಹೇಳಿಕೆ ಅಭಿನಂದನೆ:
ಮೋದಿಜೀ ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಅಪೇಕ್ಷೆ ದೇಶದ ಮತದಾರರಲ್ಲಿದೆ. ರಾಜ್ಯ ಮತ್ತು ದೇಶದ ಮತದಾರರು ಸಹ ಮತದಾನ ದಿನಾಂಕವನ್ನು ರಣೋತ್ಸಾಹದಿಂದ ಎದುರು ನೋಡುತ್ತಿದ್ದಾರೆ. ದೇಶದ ಅಲ್ಲಲ್ಲಿ ಅವಶೇಷ ರೂಪದಲ್ಲಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಿಗೂ ದೇಶದಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ಇವತ್ತು ಅನಿಸಿದೆ ಎಂದು ವಿಜಯೇಂದ್ರ ಅವರು ವಿವರಿಸಿದರು.ಮತದಾರರ ಆಶಯವನ್ನು ಅರ್ಥ ಮಾಡಿಕೊಂಡು ಅದನ್ನು ಜನರಿಗೆ ತಿಳಿಸಿದ ಖರ್ಗೆಯವರಿಗೆ ಅಭಿನಂದನೆಗಳು ಎಂದು ಹೇಳಿದರು.