ಲಕ್ನೋ, ಫೆ 04 (DaijiworldNews/AA): ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ರಾಯಭಾರಿ ಕಚೇರಿಯ ಉದ್ಯೋಗಿಯೊಬ್ಬನನ್ನು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಬಂಧಿಸಿದೆ.
ಮಾಸ್ಕೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಉದ್ಯೋಗಿ ಸತ್ಯೇಂದ್ರ ಸಿವಾಲ್ ನನ್ನು ಎಟಿಎಸ್ ಮೀರತ್ ನಲ್ಲಿ ಬಂಧಿಸಿದೆ. ಈತ 2021 ರಿಂದ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತ ಆಧಾರಿತ ಭದ್ರತಾ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಉತ್ತರ ಪ್ರದೇಶ ಹಾಪುರ್ನ ಶಹಮಹಿಯುದ್ದೀನ್ ಪುರ ಗ್ರಾಮದ ನಿವಾಸಿಯಾಗಿರುವ ಸತ್ಯೇಂದ್ರ ಸಿವಾಲ್, ಬೇಹುಗಾರಿಕೆ ಜಾಲದ ಪ್ರಮುಖ ರುವಾರಿಯಾಗಿರುತ್ತಾನೆ. ಈತ ಹಣದ ಆಸೆಗೆ ತನ್ನ ಸ್ಥಾನವನ್ನು ದುರುಪಯೋಗ ಮಾಡಿಕೊಂಡು, ಭಾರತೀಯ ಸೇನೆಯ ಆಂತರಿಕ ಮತ್ತು ಬಾಹ್ಯ ಕಾರ್ಯಾಚರಣೆ ಚಟುವಟಿಕೆಗಳ ಗೌಪ್ಯ ಮಾಹಿತಿಯನ್ನು ಹೊರತೆಗೆದು ಐಎಸ್ ಐ ಹ್ಯಾಂಡ್ಲರ್ ಗಳಿಗೆ ರವಾನಿಸುತ್ತಿದ್ದ ಎನ್ನಲಾಗಿದೆ.
ಐಎಸ್ ಐ ಹ್ಯಾಂಡ್ಲರ್ ಗಳು ಭಾರತೀಯ ವಿದೇಶಾಂಗ ಸಚಿವಾಲಯದ ಉದ್ಯೋಗಿಗಳನ್ನ ಹಣದ ಆಮಿಷವೊಡ್ಡಿ ತಮ್ಮತ್ತ ಸೆಳೆಯುತ್ತಿದೆ ಎಂಬ ಮಾಹಿತಿ ಭಾರತೀಯ ಸೇನೆ ಹಾಗೂ ಗುಪ್ತಚರ ಇಲಾಖೆಗೆ ದೊರೆತಿತ್ತು. ಈ ಆಧಾರದ ಮೇಲೆ ಭಯೋತ್ಪಾದನಾ ನಿಗ್ರಹ ದಳ ರಹಸ್ಯವಾಗಿಯೇ ತನ್ನ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಸತ್ಯೇಂದ್ರ ಸಿವಾಲ್ ಪಾಕಿಸ್ತಾನ ಗುಪ್ತಚರ ಸಂಸ್ಥೆಗೆ ಸೇನಾ ಮಾಹಿತಿ ರವಾನಿಸುತ್ತಿರುವುದು ತಿಳಿದು ಬಂದಿದೆ.