ಬೆಂಗಳೂರು,ಫೆ 04 (DaijiworldNews/AK): ಎಚ್.ಕೆ.ಪಾಟೀಲ್ ಸಂಪುಟ ಉಪಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿರುವಂತೆ ಅಕ್ರಮ ಗಣಿಗಾರಿಕೆಯ ದಂಡ ವಸೂಲಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಬೇಕು ಎಂದು ಬಿಜೆಪಿ ಸಂಸದ ಲೆಹರ್ ಸಿಂಗ್ ಸಿರೋಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು ‘ಅಕ್ರಮ ಗಣಿಗಾರಿಕೆಯಿಂದ 1.43 ಲಕ್ಷ ಕೋಟಿ ರೂ. ಬಾಕಿ ಬರಬೇಕಿದೆ ಎಂದು ಅಂದಾಜಿಸಿರುವ ಎಚ್.ಕೆ.ಪಾಟೀಲ್ ಉಪಸಮಿತಿಯ ವರದಿ ಆಧಾರದಲ್ಲಿ ಕ್ರಮ ತೆಗೆದುಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕೆ ವಿಳಂಬ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯಕ್ಕೆ ಹೆಚ್ಚಿನ ಅನುದಾನ ಪಡೆಯಲು ನವದೆಹಲಿಯಲ್ಲಿ ಪ್ರತಿಭಟಿಸುವ ಮೊದಲು, ಬಾಕಿ ವಸೂಲಿ ಮಾಡಿ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಬಳಸುವಂತೆ ಒತ್ತಾಯಿಸಿದರು.
10 ವರ್ಷಗಳ ಹಿಂದೆ 2013ರಲ್ಲಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ಭರವಸೆ ನೀಡಿದಂತೆ, ಅಕ್ರಮ ಗಣಿಗಾರಿಕೆಯಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ವಸೂಲಿ ಮಾಡುವ ಬದ್ಧತೆಯನ್ನು ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿಗಳು ಪ್ರದರ್ಶಿಸಬೇಕು ಎಂದು ಲಹರ್ ಸಿಂಗ್ ಆಗ್ರಹಿಸಿದ್ದಾರೆ.
ಈ ಹಣವನ್ನು ವಸೂಲಿ ಮಾಡಿದರೆ, ಸರ್ಕಾರಕ್ಕೆ ತನ್ನ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಾಕಷ್ಟು ಹಣ ದೊರಕಲಿದೆ. ನೀವು ಭರವಸೆ ನೀಡಿದ್ದ ಈ ಬಾಕಿಯನ್ನು ವಸೂಲಿ ಮಾಡಿ, ನಂತರ ಕೇಂದ್ರದಿಂದ ಹೆಚ್ಚುವರಿ ಅನುದಾನ ಪಡೆಯಲು ನಿಮ್ಮೊಂದಿಗೆ ಬರುವಂತೆ ಬಿಜೆಪಿ ಶಾಸಕರನ್ನು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಖಾತರಿಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ, ಹಲವು ಕಾಂಗ್ರೆಸ್ ಶಾಸಕರು ಸೇರಿದಂತೆ ತಮ್ಮದೇ ಪಕ್ಷದ ನಾಯಕರು ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪ್ರತಿಭಟನೆಯ ಪ್ರಯತ್ನಗಳು ರಾಜ್ಯ ಸರ್ಕಾರದ ವೈಫಲ್ಯಗಳ ಹತಾಶೆ, ರಾಜಕೀಯ ವಿಚಲಿತತೆ ಮತ್ತು ಕೇಂದ್ರದ ಮೇಲೆ ಆರೋಪ ಹೊರಿಸುವ ವಿಫಲ ಪ್ರಯತ್ನವಾಗಿದೆ ಎಂದು ಲಹರ್ ಸಿಂಗ್ ಹೇಳಿದರು.