ಬೆಂಗಳೂರು, ಫೆ 04 (DaijiworldNews/AA): ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರ ಪ್ರತ್ಯೇಕ ರಾಷ್ಟ್ರ ಹೇಳಿಕೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ವಿಚಾರವಾಗಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಇಂದು ಡಿಕೆ ಸುರೇಶ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿರುವುದಾಗಿ ಆರೋಪಿಸಲಾಗಿದೆ. ಇದೀಗ ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿವೈ ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು, "ಪ್ರತ್ಯೇಕ ರಾಷ್ಟ್ರದ ಕೂಗು ಎಬ್ಬಿಸಿದ್ದ ಸಂಸದ ಡಿಕೆ ಸುರೇಶ್ ಅವರ ಬೆಂಗಳೂರು ನಿವಾಸದ ಎದುರು ಶಾಂತ ರೀತಿಯಲ್ಲಿ ಪ್ರತಿಭಟಿಸುತ್ತಿದ್ದ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಇಂದು ಪೋಲಿಸರು ಅನಗತ್ಯ ಲಾಠಿ ಪ್ರಹಾರ ನಡೆಸಿ ಕಾರ್ಯಕರ್ತರು ಗಂಭೀರವಾಗಿ ಗಾಯಗೊಳ್ಳಲು ಕಾರಣರಾಗಿದ್ದಾರೆ. ಇದು ಕಾಂಗ್ರೆಸ್ ಸರ್ಕಾರಿ ಪ್ರೇರಿತ ಗೂಂಡಾಗಿರಿಯಾಗಿದೆ. ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುವ ಯಾರ ನಡೆಯನ್ನೂ ಬಿಜೆಪಿ ಸಹಿಸುವುದಿಲ್ಲ, ಎಷ್ಟೇ ಬಲಶಾಲಿಯಾದರೂ ಅವರು ಪಶ್ಚಾತಾಪ ಪಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ" ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.