ತ್ರಿಶೂರ್, ಫೆ 04 (DaijiworldNews/AA): ಮೋದಿ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಕಿರುಕುಳ ನೀಡುವುದು ಮಾತ್ರವಲ್ಲದೆ, ದೇಶದ ಬಡಜನರು ಹಾಗೂ ಮಹಿಳೆಯರನ್ನು ತುಳಿಯುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯು(ಕೆಪಿಸಿಸಿ) ಏರ್ಪಡಿಸಿದ್ದ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಗಳ ಆಡಳಿತದಲ್ಲಿ ರಾಜ್ಯಪಾಲರು ಸೇರಿದಂತೆ ಕೇಂದ್ರ ಮಧ್ಯಪ್ರವೇಶಿಸುವುದು ಹಾಗೂ ರಾಜ್ಯಗಳ ರಾಜಕೀಯ ಸ್ವಾಯತ್ತತೆಯನ್ನು ದುರ್ಬಲಗೊಳಿಸುತ್ತಿದೆ. ಜೊತೆಗೆ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಬುಡಮೇಲು ಮಾಡುತ್ತಿದೆ ಎಂದು ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಧಿಕ ಹಣದುಬ್ಬರ, ನಿರುದ್ಯೋಗವು ದೇಶದ ಬಡವರು, ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಜನಸಂಖ್ಯೆಯನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಸಂಪೂರ್ಣ ಸಾರ್ವಜನಿಕ ವಲಯವನ್ನು ಕಿತ್ತೊಗೆದು, ಖಾಸಗಿ ವಲಯಕ್ಕೆ ಪ್ರಾಶಸ್ತ್ಯ ನೀಡುವ ಉದ್ದೇಶ ಹೊಂದಲಾಗಿದೆ. ಪ್ರಧಾನಿ ಮೋದಿ ಆಡಳಿತಾವಧಿಯಲ್ಲಿನ ನಿರುದ್ಯೋಗ ಹಾಗೂ ಹಣದುಬ್ಬರ ಸಂಯೋಜನೆಯು ಬಡವರ ಸಂಕಷ್ಟವನ್ನು ಇನ್ನಷ್ಟು ತೀವ್ರಗೊಳಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.