ಮಧ್ಯ ಪ್ರದೇಶ, ಫೆ 05 (DaijiworldNews/AA): ಕಠಿಣ ಪರಿಶ್ರಮ, ಸಾಧಿಸುವ ಛಲ ಹಾಗೂ ಅಚಲ ನಂಬಿಕೆ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಸ್ವಯಂ ಅಧ್ಯಯನದ ಮೂಲಕ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐಎಎಸ್ ಅಧಿಕಾರಿ ತಪಸ್ಯ ಪರಿಹಾರ್ ಅವರೇ ಸಾಕ್ಷಿ.
ತಪಸ್ಯ ಪರಿಹಾರ್ ಅವರು ಮಧ್ಯ ಪ್ರದೇಶದ ನರಸಿಂಗ್ಪುರ್ ಮೂಲದವರು. ತಪಸ್ಯ ಅವರ ತಂದೆ ವಿಶ್ವಾಸ್ ಪರಿಹಾರ್ ರೈತರಾಗಿದ್ದು, ಅವರ ಚಿಕ್ಕಪ್ಪ ವಿನಾಯಕ್ ಪರಿಹಾರ್ ಸಾಮಾಜಿಕ ಕಾರ್ಯಕರ್ತರು. ತಪಸ್ಯ ಅವರ ಅಜ್ಜಿ ದೇವ್ ಕುನ್ವಾರ್ ಪರಿಹಾರ್ ನರಸಿಂಗ್ಪುರ್ ಜಿಲ್ಲಾ ಪಂಚಾಯತ್ ನ ಅಧ್ಯಕ್ಷರಾಗಿದ್ದವರು.
ತಪಸ್ಯ ಅವರು ಕೇಂದ್ರೀಯ ವಿದ್ಯಾಲಯದಲ್ಲಿ ತಮ್ಮ ಪದವಿಪೂರ್ವ ಶಿಕ್ಷಣವನ್ನು ಮುಗಿಸಿದರು. ಬಳಿಕ ಪುಣೆಯ ಇಂಡಿಯನ್ ಲಾ ಸೊಸೈಟಿಯ ಲಾ ಕಾಲೇಜಿನಲ್ಲಿ ಕಾನೂನು ವ್ಯಾಸಂಗ ಮಾಡಿದರು. ತಪಸ್ಯ ತಾವು ಯುಪಿಎಸ್ ಸಿ ಪರೀಕ್ಷೆ ಬರೆಯುವುದಾಗಿ ಮನೆಯಲ್ಲಿ ತಿಳಿಸಿದಾಗ ಮನೆಯವರು ಸಂಪೂರ್ಣ ಬೆಂಬಲ ನೀಡುತ್ತಾರೆ. ಆದ್ದರಿಂದ ಪದವಿ ಶಿಕ್ಷಣ ಮುಗಿದ ಬಳಿಕ ಯುಪಿಎಸ್ ಸಿ ಪರೀಕ್ಷೆ ಬರೆಯಲು ದೆಹಲಿಗೆ ತೆರಳಿದರು.
ತಪಸ್ಯ ಅವರು ಮೊದಲಿಗೆ ಪ್ರಿಲಿಮ್ಸ್ ಬರೆಯಲು ತರಬೇತಿ ಪಡೆದರು. ಆದರೆ ತಮ್ಮ ಮೊದಲ ಪ್ರಯತ್ನದಲ್ಲೇ ಪ್ರಿಲಿಮ್ಸ್ ಅಲ್ಲಿ ಉತ್ತೀರ್ಣರಾಗಲು ಸಾಧ್ಯವಾಗುವುದಿಲ್ಲ. ಬಳಿಕ ತರಬೇತಿ ಪಡೆಯದೇ ಯುಪಿಎಸ್ ಸಿ ಪರೀಕ್ಷೆಗೆ ಸ್ವಯಂ ಅಧ್ಯಯನ ನಡೆಸಲು ಪ್ರಾರಂಭಿಸುತ್ತಾರೆ. ಸ್ವಂತ ನೋಟ್ಸ್ ಮಾಡಿಕೊಂಡು ಓದುತ್ತಾರೆ. ಅಷ್ಟೇ ಅಲ್ಲದೇ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಮೂಲಕ ತನ್ನದೇ ಆದ ಸ್ಟ್ರಾಟೆಜಿಗಳನ್ನು ಬಳಸುತ್ತಾರೆ.
ಕಠಿಣ ಪರಿಶ್ರಮದ ಫಲವಾಗಿ ತಪಸ್ಯ ಅವರು 2017 ನೇ ಸಾಲಿನ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಜೊತೆಗೆ 23ನೇ ಅಖಿಲ ಭಾರತ ರ್ಯಾಂಕ್ ಕೂಡ ಗಳಿಸುತ್ತಾರೆ. ತಪಸ್ಯ ಅವರು 2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇನ್ನು ತಪಸ್ಯ ಅವರು ವಿವಾಹವಾಗಿರುವ ಗರ್ ವಿತ್ ಗಂಗ್ವಾರ್ ಅವರು ಕೂಡ ಐಎಫ್ ಎಸ್ ಅಧಿಕಾರಿಯಾಗಿರುತ್ತಾರೆ.