ಬೆಂಗಳೂರು, ಫೆ 05 (DaijiworldNews/ AK): ಶಕ್ತಿ ಯೋಜನೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ.5ವರ್ಷ ಯೋಜನೆ ಮುಂದುವರಿಯಲಿದೆ.ಮುಂದಿನ ಅವಧಿಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಅಗಲೂ ಶಕ್ತಿ ಯೋಜನೆ ಅನುಷ್ಠಾನ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಅಶ್ವಮೇಧ ಕ್ಲಾಸಿಕ್ ಬಸ್ಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಎಸ್ಆರ್ಟಿಸಿಯಿಂದ ಹೊಸ 100 ಬಸ್ ಗೆ ಚಾಲನೆ ನೀಡಿದ್ದೇವೆ. ಶಕ್ತಿ ಯೋಜನೆ ಬಂದಾಗಿನಿಂದ 1 ಕೋಟಿ 10 ಲಕ್ಷ ಜನ ನಿತ್ಯ 4 ನಿಗಮದಿಂದ ಓಡಾಡುತ್ತಿದ್ದಾರೆ ಎಂದರು.
ಆದರೆ ಶಾಲಾ ಮಕ್ಕಳಿಗೆ ಶಕ್ತಿ ಯೋಜನೆಯಿಂದ ಸಮಸ್ಯೆ ಆಗುತ್ತಿದೆ. ಪರಿಹಾರಕ್ಕೆ ಹೊಸ ಬಸ್ ಖರೀದಿ ಮಾಡುತ್ತಿದ್ದೇವೆ. ಆದಷ್ಟು ಬೇಗ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಹಿಂದಿನ ಸರ್ಕಾರ 4 ವರ್ಷಗಳಿಂದ ಒಂದು ಬಸ್ ಖರೀದಿ ಮಾಡಿರಲಿಲ್ಲ. ಈಗ ನಾವು ಸುಮಾರು 5 ಸಾವಿರ ಬಸ್ ಗಳು ಖರೀದಿಗೆ ನಿರ್ಧಾರ ಮಾಡುತ್ತಿದ್ದೇವೆ. ಅಲ್ಲದೇ ಖಾಲಿ ಹುದ್ದೆ ನೇಮಕಾತಿ ಆಗಿರಲಿಲ್ಲ. ನಮ್ಮ ಸರ್ಕಾರ 9 ಸಾವಿರ ಹುದ್ದೆ ನೇಮಕಕ್ಕೆ ಸಿಎಂ ಒಪ್ಪಿದ್ದು, ಶೀಘ್ರದಲ್ಲಿ ಪ್ರಕ್ರಿಯೆ ಶುರುವಾಗಲಿದೆ ಎಂದರು.
ಇಲ್ಲಿಯವರಗೆ 146 ಕೋಟಿ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಓಡಾಡಿದ್ದಾರೆ. ಶಕ್ತಿ ಯೋಜನೆ ಯಶಸ್ವಿಯಾಗಿದೆ. ಬಿಜೆಪಿಗಿಂತ ಉತ್ತಮವಾಗಿ ಇಲಾಖೆ ನಾವು ನಡೆಸಿದ್ದೇವೆ. ಶಕ್ತಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಹೇಳಿದರು.