ನವದೆಹಲಿ, ಫೆ 6(DaijiworldNews/SK): ಯುಪಿಎಸ್ಸಿ, ನೀಟ್, ಜೆಇಇ ಸೇರಿದಂತೆ ವಿವಿಧ ಸಾರ್ವತ್ರಿಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ನಕಲಿ ನೇಮಕಾತಿ ವೆಬ್ಸೈಟ್ ಸೇರಿದಂತೆ ಪರೀಕ್ಷಾ ಅಕ್ರಮ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಫೆ 5 ರಂದು ಲೋಕಸಭೆಯಲ್ಲಿ 'ಸಾರ್ವಜನಿಕ ಪರೀಕ್ಷೆ (ಅಕ್ರಮಗಳ ತಡೆ) ವಿಧೇಯಕ- 2024' ವನ್ನು ಸಿಬ್ಬಂದಿ ಖಾತೆ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರು ಮಂಡಿಸಿದರು.
ಲೋಕಸಭೆಯಲ್ಲಿ ಮಂಡಿಸಿದ ಈ ಹೊಸ ವಿಧೇಯದಲ್ಲಿ ಕೇಂದ್ರ ಸರಕಾರಿ ಹುದ್ದೆಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಪರೀಕ್ಷಾ ಅಕ್ರಮ ಪ್ರಕರಣಗಳಲ್ಲಿಆರೋಪ ಸಾಬೀತಾದರೆ, ಗರಿಷ್ಠ 10 ವರ್ಷ ಸಜೆ ಮತ್ತು ಕನಿಷ್ಠ 1 ಕೋಟಿ ರೂ.ದಂಡ ವಿಧಿಸಲು ಅವಕಾಶವನ್ನು ವಿಧೇಯಕದಲ್ಲಿ ಕಲ್ಪಿಸಲಾಗಿದೆ.
ಇಷ್ಟು ಮಾತ್ರವಲ್ಲದೇ ಪರೀಕ್ಷಾ ಅಕ್ರಮದಲ್ಲಿ ಪರೀಕ್ಷಾ ಸೇವಾ ಪೂರೈಕೆ ಸಂಸ್ಥೆಗಳು ಭಾಗಿಯಾದರೆ 1 ಕೋಟಿ ರೂ. ದಂಡ ವಿಧಿಸುವ ಜೊತೆಗೆ ಅವುಗಳಿಗೆ ನೀಡಲಾದ ಮಾನ್ಯತೆಯನ್ನು ರದ್ದುಗೊಳಿಸುವ ಅವಕಾಶವನ್ನು ವಿಧೇಯಕದಲ್ಲಿ ಕಲ್ಪಿಸಲಾಗಿದೆ.
ಇನ್ನು ಲೋಕಸಭೆಗೆ ಸಲ್ಲಿಸಲಾದ ಹೊಸ ವಿಧೇಯದಲ್ಲಿ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ 20 ಬಗೆಯ ಅಪರಾಧಗಳನ್ನು ಈ ವ್ಯಾಪ್ತಿಗೆ ತರಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಕನಿಷ್ಠ 5 ವರ್ಷ ಕಾರಾಗೃಹ ಶಿಕ್ಷೆ, ಸಂಘಟಿತ ಅಪರಾಧದ ಅಡಿ 5 ರಿಂದ 10 ವರ್ಷ ಶಿಕ್ಷೆ ವಿಧಿಸುವ ಅವಕಾಶ ಇರಲಿದೆ ಎಂದು ವರದಿಯಾಗಿದೆ.