ಹರಿಯಾಣ, ಫೆ 6 (DaijiworldNews/SK): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಪ್ರತಿಯೊಬ್ಬ ಅಭ್ಯರ್ಥಿಯ ಕನಸಾಗಿರುತ್ತದೆ. ಆದರೆ ಒಂದು ಬಾರಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲುಂಡರೆ ಮರು ಯತ್ನಿಸುವ ಗೋಚಿಗೆ ಹೋಗುವುದಿಲ್ಲ. ಆದರೆ ಇಲೊಬ್ಬರು, ಯುಪಿಎಸ್ ಸಿ ಪರೀಕ್ಷೆಯಲ್ಲಿ ಹಲವು ಬಾರಿ ವಿಫಲವಾದರೂ ಛಲ ಬಿಡದೇ ಪರೀಕ್ಷೆ ಬರೆದು ಉತ್ತೀರ್ಣರಾದ ದೇವಯಾನಿ ಸಿಂಗ್ ಅವರ ಯಶೋಗಾಥೆ.
ಮೂಲತಃ ಹರಿಯಾಣದಾವರಾದ ದೇವಯಾನಿ ಸಿಂಗ್ ಅವರು, ಪ್ರಾಥಮಿಕ ಶಿಕ್ಷಣವನ್ನು ಚಂಡೀಗಢದ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ 2014 ರಲ್ಲಿ, ಅವರು ಪಿಲಾನಿಯ ಗೋವಾ ಕ್ಯಾಂಪಸ್ನಲ್ಲಿರುವ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ನಿಂದ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದರು.
ಎಂಜಿನಿಯರಿಂಗ್ ಪದವೀಧರರಾದ ದೇವಯಾನಿ ಅವರ ತಂದೆ ವಿನಯ್ ಸಿಂಗ್ ಹಿಸಾರ್ನ ವಿಭಾಗೀಯ ಆಯುಕ್ತರು. ತಂದೆಯಂತೆಯೇ ಸರ್ಕಾರಿ ಅಧಿಕಾರಿ ಆಗುವ ಕನಸ್ಸನ್ನು ಕಂಡಿದ್ದ ಅವರು ಯುಪಿಎಸ್ ಸಿ ಪರೀಕ್ಷೆ ಬರೆಯಲು ಮುಂದಾದರು.
ಆದರೆ ಸ್ಪರ್ಧಾತ್ಮಕ ಪರೀಕ್ಷೆಗೆ ಎದುರಿಸಲು ಸಿದ್ದರಾದ ದೇವಯಾನಿ ಸಿಂಗ್ ಅವರಿಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಸುಲಭದ ಮಾತಗಿರಲಿಲ್ಲ. 2015, 2016, 2017ರಲ್ಲಿ ಸತತ ಸೋಲು ಕಂಡರು. ಆದರೆ ಛಲ ಬಿಡದೇ ತನ್ನ ಶ್ರಮವನ್ನು ಮುಂದುವರಿಸಿದ ಅವರು 2018 ರಲ್ಲಿ, ಅಂತಿಮವಾಗಿ UPSC ಪರೀಕ್ಷೆಯಲ್ಲಿ ಅಖಿಲ ಭಾರತ ಶ್ರೇಣಿ (AIR) 222 ಅನ್ನು ಪಡೆದುಕೊಂಡು ಕೇಂದ್ರ ಲೆಕ್ಕ ಪರಿಶೋಧನಾ ಇಲಾಖೆಗೆ ಆಯ್ಕೆಯಾದರು.
ಆದರೆ ಈ ಶ್ರೇಣಿಯಲ್ಲಿ ತೃಪ್ತಿಗೊಳ್ಳದ ದೇವಯಾನಿ ತಮ್ಮ ಯುಪಿಎಸ್ ಸಿ ರ್ಯಾಂಕ್ ಅನ್ನು ಉತ್ತಮಪಡಿಸಿಕೊಳ್ಳಲು ಮುಂದಾದರು. ಕೇಂದ್ರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ತರಬೇತಿಯ ಜೊತೆಗೆ, ದೇವಯಾನಿ ಸಿಂಗ್ ಮತ್ತೆ ಯುಪಿಎಸ್ ಸಿ ಪರೀಕ್ಷೆಗೆ ತಯಾರಿಯನ್ನು ಮುಂದುವರೆಸಿದರು. ಅವರ ಪರಿಶ್ರಮದ ಆಧಾರದ ಮೇಲೆ ಮುಂದಿನ ಪ್ರಯತ್ನದಲ್ಲಿ 11ನೇ ರ್ಯಾಂಕ್ ಗಳಿಸಿದರು.
ಈ ಮೂಲಕ ಜೀವನದಲ್ಲಿ ಅದೆಷ್ಟು ಅಡೆತಡೆಗಳು ಎದುರಾದರು ಅದನ್ನು ಛಲದಿಂದ ಎದುರಿಸಿದರೆ ಮಾತ್ರ ನಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟು ಯುವಕರಿಗೆ ಪ್ರೇರಣೆಯಾಗಿದ್ದಾರೆ.