ಬೆಂಗಳೂರು, ಫೆ 06 (DaijiworldNews/AA): ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ನಾಳೆ ದೆಹಲಿಯಲ್ಲಿ ನಡೆಸಲಿರುವ ಪ್ರತಿಭಟನೆ ವಿರುದ್ಧ ಟೀಕೆ ಮಾಡುತ್ತಿರುವ ರಾಜ್ಯ ಬಿಜೆಪಿ ನಾಯಕರಿಗೆ ಮರ್ಯಾದೆ ಇಲ್ಲ. ನಮ್ಮ ಧರಣಿಯನ್ನು ಪ್ರಶ್ನಿಸುವ ಅವರಿಗೆ ನಾಚಿಕೆಯಾಗಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗುಡುಗಿದ್ದಾರೆ.
ದೆಹಲಿಗೆ ತೆರಳಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಇವರಿಗೆ ಕಾಣಿಸುತ್ತಿಲ್ಲವೇ? 236 ತಾಲ್ಲೂಕುಗಳ ಪೈಕಿ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ನಮ್ಮ ರಾಜ್ಯದಿಂದ 4.5 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹದ ಹಣ ಕೇಂದ್ರಕ್ಕೆ ಹೋಗುತ್ತಿದೆ. ಆದರೆ ರಾಜ್ಯಕ್ಕೆ ಸಿಗುತ್ತಿರುವ ಅನುದಾನ ತೀರ ಕಡಿಮೆ ಎಂದು ಬಿಜೆಪಿಗೆ ತಿಳಿದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ರಾಜ್ಯದ ರೈತರು ಹಾಗೂ ಜನರ ಬಗ್ಗೆ ಸ್ಪಲ್ಪವಾದರೂ ಕಾಳಜಿ ಇದ್ದಿದ್ದರೆ ನಮ್ಮ ಜೊತೆ ಕೈ ಜೋಡಿಸುತ್ತಿದ್ದರು. ಆದರೆ, ಅವರು ರಾಜ್ಯ ಸರ್ಕಾರಕ್ಕೆ ಅನುದಾನ ದೊರೆಯದಿರುವುದನ್ನು ಕಂಡು ವಿಕೃತಾನಂದ ಅನುಭವಿಸುತ್ತಿದ್ದಾರೆ. ರಾಜ್ಯ ಬಿಜೆಪಿ ನಾಯಕರು ವಿಘ್ನ ಸಂತೋಷಿಗಳಾಗಿದ್ದು, ರಾಜ್ಯದಲ್ಲಿ ಅವರು ಸರ್ಕಾರ ನಡೆಸುತ್ತಿದ್ದಾಗ, ಅವರಪ್ಪನ ಮನೆಯಿಂದ ಹಣ ತರುತ್ತಿದ್ದರೇ. ಖಜಾನೆಯಲ್ಲಿ ಹಣವಿದೆಯೋ ಇಲ್ಲವೋ ಅನ್ನೋದು ಪ್ರಶ್ನೆಯಲ್ಲ, ಇಲ್ಲಿ ಪ್ರಶ್ನೆ ಇರೋದು ನಮ್ಮ ಪಾಲು ನಮಗೆ ಬರಬೇಕೆಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.